

ಮೈಸೂರು: ನಜರ್‌ಬಾದ್‌ನ ಹೈದರ್ ಅಲಿ ರಸ್ತೆ ಅಗಲೀಕರಣಕ್ಕಾಗಿ 40 ಮರ ಕಡಿದಿರುವ ಪ್ರಕರಣದ ಕುರಿತು ತನಿಖೆಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಆದೇಶಿಸಿದ್ದಾರೆ.
ಅದಕ್ಕಾಗಿ ಮೂರು ಜನರ ಸಮಿತಿ ರಚನೆ ಮಾಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿಯನ್ನು ಏಳು ದಿನದ ಒಳಗೆ ನೀಡಲು ಸೂಚಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರಿನ ಹೈದರ್ ಅಲಿ ರಸ್ತೆ ಅಗಲೀಕರಣಕ್ಕಾಗಿ ರಾತ್ರೋರಾತ್ರಿ ಮರಗಳನ್ನು ಕಡಿದಿರುವ ಪ್ರಕರಣದ ಕುರಿತು ಮಾಧ್ಯಮ, ಪರಿಸರವಾದಿಗಳು, ಸಾರ್ವಜನಿಕ ವಲಯಗಳಿಂದ ತೀವ್ರ ವಿರೋಧಗಳು ಮತ್ತು ಪ್ರತಿಭಟನೆಗಳು ನಡೆದಿವೆ.
ಈ ಹಿನ್ನೆಲೆಯಲ್ಲಿ ಈ ರಸ್ತೆಯ ಅಗಲೀಕರಣಕ್ಕಾಗಿ 40 ಮರಗಳನ್ನು ಕಡಿದಿರುವ ಪ್ರಕರಣದ ವಾಸ್ತವತೆಯನ್ನು ಪರಿಶೀಲಿಸಿ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ 3 ಸದಸ್ಯರನ್ನು ಒಳಗೊಂಡ ತನಿಖಾ ಸಮಿತಿ ರಚಿಸಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎ.ಎನ್.ರಘುನಂದ ಅಧ್ಯಕ್ಷತೆ ಸಮಿತಿಯಲ್ಲಿ ಹುಣಸೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಸದಸ್ಯರಾಗಿ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಇಂಜಿನಿಯರ್ ಕಾರ್ಯದರ್ಶಿಯಾಗಿದ್ದಾರೆ.
ಈ ಸಮಿತಿಯು ಪ್ರಾಥಮಿಕವಾಗಿ ರಸ್ತೆ ಅಗಲೀಕರಣದ ಅಗತ್ಯತೆ ಬಗ್ಗೆ ಪರಿಶೀಲಿಸುವುದು, 40 ಮರಗಳನ್ನು ಕಟಾವಿನ ಅನಿವಾರ್ಯತೆ ಕುರಿತು ತಾಂತ್ರಿಕವಾಗಿ ಪರಿಶೀಲಿಸುವುದು ಮತ್ತು ಮರ ಹನನಕ್ಕೆ ಅನುಮತಿಸಲು ಎಲ್ಲ ಶಾಸನಬದ್ಧ ಕಾರ್ಯವಿಧಾನಗಳನ್ನು ಅನುಸರಿಸಿ, ನಿಯಮಬದ್ಧವಾಗಿ ಅನುಮತಿಸಿರುವುದನ್ನು ಸಮಿತಿ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತನಿಖೆಗೆ ಆದೇಶಿಸಿದ್ಧಾರೆ. ರಸ್ತೆ ಅಗಲೀಕರಣದ ಅಗತ್ಯ ಇತ್ತೆ? ಮರ ಕಡಿಯುವ ಅಗತ್ಯವಿತ್ತೆ?
ಮರ ಕಡಿತಕ್ಕೆ ನಿಯಮಾನುಸಾರ ಕ್ರಮ ವಹಿಸಲಾಗಿದೆಯೇ ಎಂಬುದರ ಕುರಿತು ಸಿಸಿಎಫ್ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಿ 7 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ, ಎರಡು ತನಿಖಾ ತಂಡಗಳು ರಚನೆಯಾದಂತಾಗಿವೆ.