ಮರ ಕಡಿತಲೆ ಪತ್ತೆಹಚ್ಚಲು ಬಂತು ಹೊಸ ಆಪ್

web 1 (8)
Published on



ಎನ್.ಆರ್.ಪುರ: ಅರಣ್ಯ ಪ್ರದೇಶದಲ್ಲಿ ಯಾವುದೇ ಮರಗಳನ್ನು ಕಡಿದರೆ ಅಥವಾ ಹಸಿರು ವಲಯ ಬದಲಾವಣೆಯಾದಲ್ಲಿ ‘ಫಾರೆಸ್ಟ್ ಕವರ್ ಚೇಂಜ್ ಅಲರ್ಟ್ ಸಿಸ್ಟಮ್ ಆಪ್ ಮೂಲಕ ಸುಲಭವಾಗಿ ಕಂಡುಹಿಡಿಯಬಹುದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಧು ಶರ್ಮ ಹೇಳಿದರು.
ಈಗಾಗಲೇ ಸೆಟಲೈಟ್​ಗೆ ಅರಣ್ಯ ಪ್ರದೇಶದ ಗಡಿ ಅಪ್​ಲೋಡ್ ಮಾಡಲಾಗಿದೆ. ಈ ಅರಣ್ಯ ಪ್ರದೇಶದ ಮಧ್ಯೆ ಅಥವಾ ಆಸುಪಾಸಿನಲ್ಲಿ ಬದಲಾವಣೆಯಾದರೂ ತಕ್ಷಣ ಈ ಆಪ್ ನಮಗೆ ಮಾಹಿತಿ ನೀಡುತ್ತದೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಅರಣ್ಯದ ಮಧ್ಯದಲ್ಲಿ ಕೆಲ ರೈತರಿಗೆ ಜಮೀನು ಮಂಜೂರಾಗಿರುತ್ತದೆ. ಅಂತಹ ಜಮೀನಿನಲ್ಲಿ ಅಡಕೆ ಬೆಳೆದ ರೈತರು ನಂತರ ಕಾರಣಾಂತರದಿಂದ ಅವುಗಳನ್ನು ಕಡಿದು ಶುಂಠಿ ಹಾಕುತ್ತಾರೆ. ಆಗ ಮರಗಳ ಕಡಿತಲೆಯಾಗಿರುವ ಬಗ್ಗೆ ಆಪ್ ಅಲರ್ಟ್ ಮಾಡುತ್ತದೆ. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅವಲೋಕಿಸುತ್ತಾರೆ. ನಂತರ ವಸ್ತುಸ್ಥಿತಿಯ ಮಾಹಿತಿ ಮತ್ತು ತೆಗೆದುಕೊಂಡ ಕ್ರಮಗಳನ್ನು ಆಪ್​ಗೆ ಅಪ್​ಲೋಡ್ ಮಾಡಬೇಕು ಎಂದು ಮಾಹಿತಿ ನೀಡಿದರು.
21 ದಿನಗಳಿಗೊಮ್ಮೆ ಸಂಪೂರ್ಣ ಚಿತ್ರಣ ದೊರೆಯುತ್ತದೆ. 21 ದಿನಗಳ ಚಿತ್ರಣ ಸೆರೆಹಿಡಿದಿಟ್ಟುಕೊಂಡು ನಂತರದ 21 ದಿನಗಳಲ್ಲಿ ಅದರ ಚಿತ್ರಣದಲ್ಲಿ ಸ್ವಲ್ಪ ಬದಲಾವಣೆಯಾದರೂ ನಮಗೆ ಮಾಹಿತಿ ಬರುತ್ತದೆ. ಇದರಿಂದ ಮರ ಕಡಿತಲೆ ತಡೆದು ಅರಣ್ಯ ಸಂರಕ್ಷಣೆ ಮಾಡಬಹುದಾಗಿದೆ. ಈ ಆಪ್ ಡಿಸೆಂಬರ್​ನಲ್ಲಿ ಲಾಂಚ್ ಆಗಿದೆ. ಇದರ ಸಾಧಕ-ಬಾಧಕ, ಆಪ್​ನ ದೋಷಗಳ ಬಗ್ಗೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net