

ಕೊಳ್ಳೇಗಾಲ: ಕಾಲುವೆ ನೀರು ನುಗ್ಗಿ ಬೆಳೆ ಹಾನಿಯಾಗಿದ್ದರಿಂದ ನೊಂದಿದ್ದ ರೈತ ಸೋಮವಾರ ತಾಲೂಕು ಕಚೇರಿ ಆವರಣದಲ್ಲಿದ್ದ ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪಟ್ಟಣದ ಉಪ್ಪಾರ ಬಡಾವಣೆ ನಿವಾಸಿ ರಾಮಕೃಷ್ಣ ಆತ್ಮಹತ್ಯೆಗೆ ಯತ್ನಿಸಿದ ರೈತ. ಪಟ್ಟಣದ ಹಳೇ ಹಂಪಾಪುರ ಸಮೀಪವಿರುವ ಜಮೀನಿಗೆ ಕಾಲುವೆ ನೀರು ಹರಿದು ನಾಟಿ ಮಾಡಿದ್ದ ಪೈರು ನಾಶವಾಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ತಾಲೂಕು ಕಚೇರಿ ಮುಂಭಾಗದಲ್ಲಿರುವ ಹೊಂಗೆ ಮರ ಏರಿದ ಸಮಯದಲ್ಲಿ ಅಲ್ಲಿದ್ದ ಪೊಲೀಸ್ ಅಧಿಕಾರಿ ತಡೆಯುವ ಪ್ರಯತ್ನ ಮಾಡಿದ್ದಾರೆ.
ಈ ವೇಳೆ ಜಗ್ಗದ ರೈತ ರಾಮಕೃಷ್ಣ, ರೈತರಿಗೆ ಆಗಿರುವ ತೊಂದರೆಯನ್ನು ಕೇಳುವರಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ತನದಿಂದಾಗಿ ಸಾಲ ಮಾಡಿ ನಾಟಿ ಮಾಡಿದ್ದ ಪೈರು ಜಲಾವೃತವಾಗಿ ನಷ್ಟ ಅನುಭವಿಸಿದ್ದೇವೆ. ಹಲವು ಬಾರಿ ಸಮಸ್ಯೆ ಹೇಳಿಕೊಂಡರೂ ಸ್ಪಂದಿಸದ ಅಧಿಕಾರಿಗಳ ನಡೆ ಖಂಡಿಸಿ ಸಾಯಲು ತೀರ್ಮಾನಿಸಿದ್ದೇನೆ ಎಂದು ವಾಗ್ವಾದಕ್ಕಿಳಿದರು.
ಸಮಸ್ಯೆಯಾಗಿದ್ದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಪೊಲೀಸ್ ಅಧಿಕಾರಿ ಮನವೊಲಿಸಿ ಮರದಿಂದ ಕೆಳಕ್ಕೆ ಇಳಿಸಿದರು. ಬಳಿಕ ಉಪವಿಭಾಗಾಧಿಕಾರಿ ಗೀತಾ ಹುಡೇದ ಭೇಟಿ ಮಾಡಿ ತಮಗಾಗಿರುವ ತೊಂದರೆ ಬಗ್ಗೆ ವಿವರಿಸಿ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನಷ್ಟ ಭರಿಸಬೇಕು. ನೀವು ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಬೇಕು ಎಂದು ಪಟ್ಟುಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೀತಾ ಹುಡೇದ ಸ್ಥಳ ಪರಿಶೀಲನೆಗೆ ಬರುವುದಾಗಿ ಭರವಸೆ ನೀಡಿದರು. ಬಳಲಿದ್ದ ರೈತ ರಾಮಕೃಷ್ಟ ಅವರಿಗೆ ಬೆಳಗಿನ ಉಪಾಹಾರ ಕೊಡಿಸಿ ಉಪಚರಿಸಿದ ಬಳಿಕ ಕಚೇರಿ ವಾಹನದಲ್ಲೇ ಕೂರಿಸಿಕೊಂಡು ಸ್ಥಳಕ್ಕೆ ತೆರಳಿದರು.
ನೀರು ಹಾಯ್ದು ಜಮೀನು ವೀಕ್ಷಣೆ ಮಾಡಿದ ಎಸಿ: ಕಾಲುವೆ ತುಂಬಿ ಹರಿದು ಜಮೀನು ಮುಳುಗಡೆಯಾಗಿದ್ದು ಜಮೀನಿಗೆ ತೆರಳುವ ರಸ್ತೆ ಮೇಲೂ ಮೊಣಕಾಲು ಮಟ್ಟದಲ್ಲಿ ನೀರು ಹರಿಯುತ್ತಿತ್ತು. ಇದನ್ನು ಲೆಕ್ಕಿಸದೆ ಉಪವಿಭಾಗಾಧಿಕಾರಿ ಗೀತಾ ಹುಡೇದ ನೀರನ್ನು ಹಾಯ್ದುಕೊಂಡೆ ರೈತನ ಜತೆ ತೆರಳಿ ಹಾನಿಗೊಳಗಾಗಿದ್ದ ಜಮೀನು ವೀಕ್ಷಣೆ ಮಾಡಿದರು.
ನೀರಾವರಿ ಇಲಾಖೆ ಅಧಿಕಾರಿಗಳಿಗೆ ತರಾಟೆ: ಕಾಲುವೆಗಳಲ್ಲಿ ಅಪಾರ ಮಟ್ಟದಲ್ಲಿ ಹೂಳು ತುಂಬಿರುವುದರಿಂದ ನೀರು ಸರಾಗವಾಗಿ ಹರಿಯಲಾಗದೆ ರೈತರ ಜಮೀನಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದ್ದನ್ನು ಕಣ್ಣರೆ ಕಂಡ ಉಪವಿಭಾಗಾಧಿಕಾರಿ ಗೀತಾ ಹುಡೇದ ಅವರು ನೀರಾವರಿ ಇಲಾಖೆ ಎಇಇ ರಾಮಕೃಷ್ಟ ಅವರನ್ನು ತರಾಟೆಗೆ ತೆಗೆದುಕೊಂಡರು. ಇನ್ನೂ 3ಗಂಟೆಯೊಳಗೆ ಜಮೀನಿಗೆ ನುಗ್ಗುವ ನೀರು ತಡೆಯದಿದ್ದರೆ ನೋಟಿಸ್ ನೀಡಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕಾಗುತ್ತದೆ ಎಂದು ತಾಕೀತು ಮಾಡಿದರು.
ಈ ವೇಳೆ ರೈತ ಸಂಘದ ದಶರಥ್ ಮಾತನಾಡಿ, ಗುಂಡಾಲ್ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ಎಲ್ಲ ಕಾಲುವೆಗಳ ಸ್ಥಿತಿ ಚಿಂತಾಜನಕವಾಗಿದೆ. ಅದರ ಪರಿಣಾಮವನ್ನು ರೈತರು ಅನುಭವಿಸುತ್ತಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕಾಲುವೆ ದುರಸ್ತಿ ವಿಚಾರದಲ್ಲಿ ಎಚ್ಚರಿಕೆ ನೀಡಿ ಹೂಳು ತೆರವಿಗೆ ಕ್ರಮವಹಿಸಬೇಕೆಂದು ಒತ್ತಾಯಿಸಿದರು. ಕೃಷಿ ಇಲಾಖೆಯ ನಾಗೇಂದ್ರ ಇತರರು ಇದ್ದರು.
ನೀರಾವರಿ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದ ರೈತ: ಆತ್ಮಹತ್ಯೆಗೆ ಪ್ರಯತ್ನಿಸಿದ್ದ ರೈತ ಬಳಿಕ ತಾಲೂಕು ಕಚೇರಿ ಮುಂಭಾಗ ಕುಳಿತು ಬೆಳೆ ನಷ್ಟಕ್ಕೆ ಕಾರಣರಾದ ನೀರಾವರಿ ಇಲಾಖೆ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹಾಕುವ ಮೂಲಕ ಏಕಾಂಗಿ ಪ್ರತಿಭಟನೆ ನಡೆಸಿದರು.