

ತುಮಕೂರು: ಪರಸ್ಪರ ಸಹಕಾರ ಹಾಗೂ ಸಹಾಯದಿಂದ ಸರ್ವರೂ ಶ್ರೇಯಸ್ಸು ಸಾಧಿಸಬಹುದು. ಶ್ರೀರಾಮಕೃಷ್ಣರು ಹೇಳುವಂತೆ ನಮ್ಮ ಅಹಂಕಾರ ಬಿಟ್ಟು, ಮಮಕಾರವನ್ನು ವಿಸತಗೊಳಿಸಬೇಕು ಎಂದು ಉತ್ತರಪ್ರದೇಶದ ಮಥುರಾ ಸಮೀಪದ ರಮಣರೇತಿಯ ಮಹಾಮಂಡಲೇಶ್ವರ ಶ್ರೀಕಾರ್ಷಣಿ ಗುರುಶರಣಾನಂದಜೀ ಹೇಳಿದರು.
ನಗರದ ರಾಮಕೃಷ್ಣ- ವಿವೇಕಾನಂದ ಆಶ್ರಮದಲ್ಲಿ ನೂತನವಾಗಿ ನಿರ್ಮಿಸಿರುವ "ಬ್ರಹ್ಮಲಿನ ಪೂಜ್ಯ ಸ್ವಾಮಿ ಪುರುಷೋತ್ತಮಾನಂದ ಭವನ'ದ ಸಾಧುನಿವಾಸ ಹಾಗೂ "ಶ್ರೀರಾಮಕೃಷ್ಣ ಸ್ಟೂಡೆಂಟ್ಸ್ ಹೋಮ್'ನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಇಡೀ ಜಗತ್ತು ಈಶ್ವರ ಸ್ವರೂಪವಾಗಿರುವುದರಿಂದ ಜೀವಸೇವೆ ಎಂಬುದು ಈಶಸೇವೆ. ಜೀವದಯೆ ತೋರುವುದಲ್ಲ, ಜೀವಸೇವೆ ಮಾಡಬೇಕು. ನಮ್ರತೆಯಿಂದ ಮಾಡಿದಾಗ ಸೇವೆಯೇ ಪೂಜೆಯಾಗುತ್ತದೆ. ಸೇವೆಯಲ್ಲಿ ತೊಡಗಿದಾಗ ಅಹಂಕಾರ ಪಡಬಾರದು, ಧನ್ಯತಾಭಾವ ಮೂಡಬೇಕು ಎಂದರು. ಆಗ ಭಗವಂತನೇ ಕೈಹಿಡಿದು ಗುರಿಯೆಡೆಗೆ ಕರೆದೊಯ್ಯುತ್ತಾನೆ. ಶ್ರೀಮಾತೆ ಶ್ರೀಶಾರದಾದೇವಿಯವರ 172ನೇ ಜನ್ಮದಿನೋತ್ಸವ ಸಂದರ್ಭದಲ್ಲಿ ಶ್ರೀಮಾತೆಯವರ ಆದರ್ಶ ಜೀವನ ಕೇವಲ ಬೌದ್ಧಿಕವಾಗಿ ಅಧ್ಯಯನ ಮಾಡುವುದಲ್ಲ, ನಮ್ಮ ಚಾರಿತ್ರ ವಿಕಾಸಕ್ಕಾಗಿ, ಆಧ್ಯಾತಿಕ ವಿಕಾಸಕ್ಕಾಗಿ ಮಾಡಬೇಕು. ಅವರ ಪೂರ್ಣ ಜೀವನವೇ ಒಂದು ಆದರ್ಶ. ಶ್ರೀಮಾತೆಯವರ ಅಸೀಮ ಕರುಣೆ ಕೇವಲ ಮನುಷ್ಯರೆಡೆಗೆ ಮಾತ್ರವಲ್ಲ, ಪಾಣಿಗಳೆಡೆಗೂ ಹರಿಯುತ್ತಿತ್ತು. ಗೃಹವೆಂಬುದು ಭಗವಂತನ ನಿವಾಸ, ನಿತ್ಯ ಜೀವನದಲ್ಲಿ ಜಡವಸ್ತುಗಳಿಗೂ ಗೌರವಕೊಡುವುದನ್ನು ತೋರಿಸಿಕೊಟ್ಟರು ಎಂದರು.
ವಿಜಯಪುರದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿ, ಅಪ್ರಾಮಾಣಿಕವಾಗಿ ಶ್ರದ್ಧೆಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾ ಪ್ರತಿಯೊಬ್ಬ ಮನುಷ್ಯನೂ ಹಾರೈಸಬೇಕು ಎಂದು ಈಶಾವಾಸ್ಯ ಉಪನಿಷತ್ತು ಪ್ರತಿಪಾದಿಸುತ್ತದೆ. ಯಾರು ಇತರರಿಗಾಗಿ ಬದುಕುತ್ತಾರೆಯೋ ಅವರದ್ದೇ ನಿಜವಾದ ಜೀವನ. ಉಳಿದವರು ಬದುಕಿದ್ದರೂ ಸತ್ತಂತೆ. ಉಳ್ಳವರು ಇಲ್ಲದವರಿಗೆ ಸಹಾಯ ಮಾಡಬೇಕು. ದೀನದೇವೋಭವ, ದರಿದ್ರದೇವೋಭವ ರೋಗಿ ದೇವೋಭವ, ಪಾಪಿದೇವೋಭವ
ಮಂತ್ರವಾಗಬೇಕು ಎಂದರು.
ಜೀವಂತ ದುರ್ಗಾಪೂಜಾ: ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ "ಜೀವರಲ್ಲಿ ಶಿವನನ್ನು ಕಂಡು ಆರಾಧಿಸು' ಎಂಬ ಹಿತೋಕ್ತಿಯನ್ನಾಧರಿಸಿದ "ಜೀವಂತ ದುರ್ಗಾಪೂಜಾ' ಕಾರ್ಯಕ್ರಮದಲ್ಲಿ ನಗರದ ಕೊಳೆಗೇರಿಗಳಲ್ಲಿ ವಾಸ ಮಾಡುವ, ರಸ್ತೆಯಲ್ಲಿ ಭಿಕ್ಷೆ ಬೇಡುವ ಸುಮಾರು 351 ಅಶಕ್ತ ದೀನ-ದಲಿತ- ದುರ್ಬಲ ತಾಯಂದಿರನ್ನು ಆಶ್ರಮಕ್ಕೆ ವೇದಘೋಷ ಮತ್ತು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ, ಅವರುಗಳನ್ನು 'ಸಾಕ್ಷಾತ್ ಶ್ರೀ ಶಾರದಾದೇವಿ' ಎಂದೇ ವಿಧ್ಯುಕ್ತವಾಗಿ ಪೂಜಿಸಿ ಅನ್ನದಾನ, -ವಸ್ತ್ರದಾನ-ಧಾನ್ಯ ಹಾಗೂ ದಾನಗಳಿಂದ ಸತ್ಕರಿಸಲಾಯಿತು.
ಜೀವಂತ ದುರ್ಗಾಪೂಜೆ ಬೆಳ್ಳಿಹಬ್ಬದ ಆಚರಣೆಯನ್ನು ಕೇಂದ್ರ ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ ಜಯರಾಮ್ ರಾಯಪುರ್ ಉದ್ಘಾಟಿಸಿದರು. ಸಮಾಜ ಸೇವಕಿ ಗೀತಾರಾವ್, ನಾಗರತ್ನಮ್ಮ ಹಾಗೂ ಅನ್ನಪೂರ್ಣಮ್ಮ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು. ಋತ್ವಿಕರಾದ ಶ್ರೀಸುಬ್ರಹ್ಮಣ್ಯಶಾಸ್ತ್ರಿ ಮತ್ತು ಶ್ರೀಬಿದರೆ ಶ್ರೀಹರಿಶಾಸ್ತ್ರಿ ಶ್ರೀಗಣಪತಿ ಹೋಮ ಹಾಗೂ ಶ್ರೀ ಚಂಡೀ ಹೋಮ ನೆರವೇರಿಸಿಕೊಟ್ಟರು. ಸ್ವಾಮಿ ಧೀರಾನಂದಜೀ ಮಹಾರಾಜ್ ಶ್ರೀಶಾರದಾದೇವಿ ಹೋಮ ನೆರವೇರಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಕಟ್ಟಡ ನಿಮಾರ್ಣಕ್ಕೆ ಸಹಾಯಹಸ್ತ ನೀಡಿದ ಡಾ.ಎಸ್.ಆರ್.ರಮೇಶ್, ಪತ್ತಿ ಶ್ರೀಧರ್, ಕೋಡಾಮರಿ ಜಯರಾಮ್ ಸುಂದರಮೂರ್ತಿ, ಪ್ರಭಾ ಸುಂದರಮೂರ್ತಿ ಮತು ನಾಗೇಶ್ಉಡುಪ ಅವರನ್ನು ಸನ್ಮಾನಿಸಲಾಯಿತು. ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಮಾಡನಾಡಿದರು, ರಮ್ಯ
ಕಲ್ಲೂರ್ ಸ್ವಾಮಿ ಪರಮಾನಂದಜೀ ಇದ್ದರು.