ಮನ್ನಾಎಖೇಳ್ಳಿ ಜಿಪಂ ಕ್ಷೇತ್ರ ಮಾಡಿ

18-02hbd1
Published on

ಚಿಟಗುಪ್ಪ: ಕ್ಷೇತ್ರ ಮರು ವಿಂಗಡಣೆಯಲ್ಲಿ ಮನ್ನಾಎಖೇಳ್ಳಿ ಗ್ರಾಮವನ್ನು ನಿರ್ಣಾ ಜಿಪಂ ಕ್ಷೇತ್ರಕ್ಕೆ ಸೇರಿಸಿರುವುದು ತಡೆಹಿಡೆದು ಮನ್ನಾಎಖೇಳ್ಳಿಗೆ ಪ್ರತ್ಯೇಕ ಜಿಪಂ ಕ್ಷೇತ್ರ ಮಾಡಬೇಕು ಎಂದು ಗ್ರಾಪಂ ಸದಸ್ಯರು ಹಾಗೂ ಸ್ಥಳೀಯರು ಪ್ರಬಲ ಬೇಡಿಕೆ ಮಂಡಿಸಿದ್ದಾರೆ.

ಬೀದರ್ ನಲ್ಲಿ ಡಿಸಿ ರಾಮಚಂದ್ರನ್ ಅವರಿಗೆ ನಿಯೋಗದ ಮೂಲಕ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ, ಮನ್ನಾಎಖೇಳ್ಳಿ ಗ್ರಾಮ ಈ ಹಿಂದೆ ಬೇಮಳಖೇಡ್ ಜಿಪಂ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿತ್ತು. ಆದರೆ ಮರು ವಿಂಗಡಣೆಯಲ್ಲಿ ನಿರ್ಣಾ ಕ್ಷೇತ್ರಕ್ಕೆ ಸೇರಿಸಲಾಗಿದೆ. ಇದಕ್ಕೆ ನಾವು ಸುತಾರಾಂ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮನ್ನಾಎಖೇಳ್ಳಿ ಕೇಂದ್ರ ಬಿಂದುವಿದ್ದು, 12039 ಜನ ಸಂಖ್ಯೆ ಹೊಂದಿದೆ. ಆದರೆ ಕ್ಷೇತ್ರ ವಿಂಗಡಣೆಯಲ್ಲಿ 4291 ಜನಸಂಖ್ಯೆ ಹೊಂದಿದ ತಾಳಮಡಗಿ ಗ್ರಾಮಕ್ಕೆ ಜಿಪಂ ಕ್ಷೇತ್ರವನ್ನಾಗಿ ಮಾಡಲಾಗಿದೆ. ಇಲ್ಲಿ ಗ್ರಾಮಕ್ಕೆ ಆದ ಅನ್ಯಾಯ ಸರಿಪಡಿಸಿ ಜಿಪಂ ಕ್ಷೇತ್ರವನ್ನಾಗಿ ಮಾಡಬೇಕು. ಬೇಡಿಕೆಗೆ ಸ್ಪಂದಿಸದಿದ್ದರೆ ಮುಂಬರುವ ಜಿಪಂ, ತಾಪಂ ಚುನಾವಣೆಯನ್ನು ಬಹಿಷ್ಕರಿಸುವ ಜತೆಗೆ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಗ್ರಾಪಂ ಮಾಜಿ ಅಧ್ಯಕ್ಷರಾದ ಸಂತೋಷ ಹಳ್ಳಿಖೇಡ್, ಮಹ್ಮದ್ ಫಾರೂಖ್ ಜಮಾದಾರ, ಸದಸ್ಯರಾದ ಶಂಕರ ಜೋತಗೊಂಡ, ವೀರಸಂಗಪ್ಪ ಪವಾಡೆ, ರಾಜಕುಮಾರ ಅಗಸಿ, ಮುದಾಸ್ಸಿರ್ ಬಾಗವಾನ್, ಭೀಮಶೆಟ್ಟಿ ಹಸರಗುಂಡಗಿ, ಮಾಜಿ ಸದಸ್ಯ ಸಂತೋಷ ಕಮಲಪುರ, ಪ್ರಮುಖರಾದ ಅಜಮ್ ಪಟೇಲ್, ಇಸ್ಮಾಯಿಲ್ ಪಟೇಲ್, ಬಸವರಾಜ ಅಲರಡ್ಡಿ, ಶರಣಪ್ಪ ಗಣಗೊಂಡ ಇತರರು ಇದ್ದರು.

ಮನ್ನಾಎಖೇಳ್ಳಿ ಗ್ರಾಮ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದು, 12 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಸಾರಿಗೆ ಸಂಪರ್ಕ, ಶೈಕ್ಷಣಿಕ ಹಾಗೂ ವ್ಯಾಪಾರ ಕೇಂದ್ರವಾಗಿದೆ. ದಕ್ಷಿಣ ವಿಧಾನಸಭೆ ಕ್ಷೇತ್ರದ ಪ್ರಮುಖ ಕೇಂದ್ರ ಮನ್ನಾಎಖೇಳ್ಳಿಗೆ ಕ್ಷೇತ್ರ ಮರು ವಿಂಗಡಣೆಯಲ್ಲಿ ಅನ್ಯಾಯವಾಗಿದೆ. ಜಿಲ್ಲಾಡಳಿತ ನ್ಯಾಯ ಒದಗಿಸದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು.| ಸಂತೋಷ ರಾಸೂರಜೆಡಿಎಸ್ ಯುವ ಮುಖಂಡ

ಜನಸಂಖ್ಯೆ ಅನುಗುಣವಾಗಿ ಅಭಿವೃದ್ಧಿ ದೃಷ್ಟಿಯಿಂದ ಮನ್ನಾಎಖೇಳ್ಳಿಗೆ ಪಟ್ಟಣ ಪಂಚಾಯಿತಿ ಮಾಡಲು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗ ಮರು ವಿಂಗಡಣೆಯಲ್ಲಿ ಜಿಪಂ ಕ್ಷೇತ್ರ ಸಹ ನೀಡದಿರುವುದು ಅನ್ಯಾಯದ ಪರಮಾ ವಧಿ ಎನಿಸಿದೆ. ಕೂಡಲೇ ಸ್ಥಳೀಯರ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯ.| ಮಹ್ಮದ್ ನೂರೋದ್ದಿನ್ತಾಪಂ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net