

ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ನಿವಾಸದಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಆಲಿಸಿದರು.
ಬೆಳಗ್ಗೆ 11ರಿಂದ 11.30ರವರೆಗೆ ನಡೆದ ಮನ್ ಕಿ ಬಾತ್ನಲ್ಲಿ ಕೇಂದ್ರ ಸಚಿವರೊಂದಿಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಶಿಕ್ಷಣ ತಜ್ಞರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುರಳೀಧರನ್, ಮನ್ ಕಿ ಬಾತ್ ಪ್ರಧಾನಿ ನರೇಂದ್ರ ಮೋದಿಯವರ ಹೊಸ ಪರಿಕಲ್ಪನೆ. ಜನರು ತಮ್ಮ ಸಮಸ್ಯೆಯನ್ನು ಪ್ರಧಾನಿ ಜತೆ ನೇರವಾಗಿ ಹಂಚಿಕೊಳ್ಳಬಹುದು. ಜನಸಾಮಾನ್ಯರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವ ಪ್ರಧಾನಿ, ಅವರನ್ನು ಸಂರ್ಪಸುತ್ತಾರೆ. ಒಳ್ಳೆಯ ವಿಚಾರಗಳನ್ನು ಪ್ರಶಂಸಿಸುತ್ತಾರೆ. ಇದು ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆಗೆ ನಿದರ್ಶನ. ಸಾಮಾನ್ಯ ನಾಗರಿಕರನ್ನು ಸರ್ಕಾರದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ ಎಂದರು.
ಮನ್ ಕಿ ಬಾತ್ ಕಾರ್ಯಕ್ರಮದ ನಂತರ ಸಚಿವ ಮುರಳೀಧರ್ ಅವರು ಸ್ಥಳೀಯ ಶಿಕ್ಷಣ ತಜ್ಞರೊಂದಿಗೆ ಕೆಲಕಾಲ ರ್ಚಚಿಸಿದರು. ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಕುಲಸಚಿವರಾದ ಡಾ. ಕೆ.ಟಿ. ಹನುಮಂತಪ್ಪ, ಡಾ. ಎಚ್. ನಾಗರಾಜ, ವಿಶ್ರಾಂತ ಕುಲಪತಿಗಳಾದ ಪ್ರೊ. ಎಸ್.ಎಸ್. ಸೈದಾಪುರ, ಪ್ರೊ. ಎಸ್.ಕೆ. ಮೂಲಿಮನಿ, ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜ್ ಪ್ರಾಚಾರ್ಯ ಡಾ. ಕೆ. ಗೋಪಿನಾಥ, ಇತರರು ಪಾಲ್ಗೊಂಡಿದ್ದರು.
ಕುಲಪತಿ ನಿವಾಸ ಏಕೆ?
ಕೇಂದ್ರ ಸಚಿವ ಮುರಳೀಧರನ್ ಅವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ನಗರದಲ್ಲಿ ಹಿಂದಿ ಪ್ರಚಾರ ಸಭಾ ಇದ್ದರೂ ಮೋದಿಯವರ ಮನ್ ಕಿ ಬಾತ್ ಆಲಿಸಲು ಕವಿವಿ ಕುಲಪತಿ ಪ್ರೊ. ಗುಡಸಿ ಅವರ ನಿವಾಸವನ್ನು ಆಯ್ಕೆ ಮಾಡಲಾಗಿತ್ತು. ಕರ್ನಾಟಕ ವಿಶ್ವವಿದ್ಯಾಲಯವು ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಮುಂಚೂಣಿಯಲ್ಲಿದ್ದು, ಅಧಿಕಾರಿಗಳೊಂದಿಗೆ ಶೈಕ್ಷಣಿಕ ಚಟುವಟಿಕೆ, ಸಂಶೋಧನೆ, ಯೋಜನೆಗಳ ಬಗ್ಗೆ ರ್ಚಚಿಸಲು ಪೂರಕವಾಗಿ ಕವಿವಿ ಕುಲಸಚಿವರ ನಿವಾಸ ಆಯ್ಕೆ ಮಾಡಲಾಗಿತ್ತು ಎನ್ನಲಾಗಿದೆ.
ಮಾಸ್ಕ್, ಅಂತರ ಮರೆತರು...
ಜಿಲ್ಲೆಯಲ್ಲಿ ಭಾನುವಾರ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದೆ. ಈ ಮಧ್ಯೆ ಇಡೀ ದಿನ ಕೇಂದ್ರ ಸಚಿವ ವಿ. ಮುರಳೀಧರನ್ ಕಾರ್ಯಕ್ರಮಗಳು ನಡೆದವು. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಕಾರ್ಯಕ್ರಮ ಹಾಗೂ ಕವಿವಿ ಕುಲಪತಿ ನಿವಾಸದಲ್ಲಿ ನಡೆದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡ ಸಂದರ್ಭದಲ್ಲೂ ಕೆಲವರು ಮಾಸ್ಕ್ ಧರಿಸದಿರುವುದು ಕಂಡುಬಂತು.
ನಿರಂತರ ಸೇವೆಗೆ ಅಗತ್ಯ ಸಹಕಾರ
ಧಾರವಾಡ: ಜಿಲ್ಲಾಧಿಕಾರಿ ಕಚೇರಿ ಬಳಿಯ ಹಿಂದಿ ಪ್ರಚಾರ ಸಭಾದಲ್ಲಿ ಆಯೋಜಿಸಿದ್ದ ಬೃಹತ್ ವೃಕ್ಷ ಸಂಕಲನಾ (ವನಮಹೋತ್ಸವ) ಕಾರ್ಯಕ್ರಮ, ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ಮುರಳೀಧರನ್ ಅವರು ಸಭಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಸಿ ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿ, ‘ಕರ್ನಾಟಕ ಪ್ರಾಂತದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಕ್ಕೆ ಮೊದಲ ಬಾರಿ ಭೇಟಿ ನೀಡುತ್ತಿದ್ದೇನೆ. ಇದೇ ಸಮಯದಲ್ಲಿ ವನಮಹೋತ್ಸವ ಆಚರಿಸಿದ್ದು ಸಂತಸ ತಂದಿದೆ. ಸಭಾದಿಂದ ಎಲ್ಲ ಹಂತದ ಶಿಕ್ಷಣದ ಜತೆಗೆ ಆರೋಗ್ಯ ಕಾಳಜಿ ವಹಿಸಿದ್ದು ಹೆಮ್ಮೆಯ ಸಂಗತಿ. ಈ ಸೇವೆ ನಿರಂತರವಾಗಿರಲಿ. ಎಲ್ಲ ರೀತಿಯ ಸಹಕಾರ ಸಿಗಲಿದೆ’ ಎಂದು ಶುಭ ಹಾರೈಸಿದರು. ಬಳಿಕ ಕೋವಿಡ್-19 ನಿಯಂತ್ರಣ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸಿದ ಸಂಸ್ಥೆಯ ಕರೊನಾ ಸೇನಾನಿಗಳಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷ ಈರೇಶ ಅಂಚಟಗೇರಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಉಪವಿಭಾಗಾಧಿಕಾರಿ ಡಾ. ಬಿ. ಗೋಪಾಲಕೃಷ್ಣ, ಸಭಾ ಸದಸ್ಯರಾದ ಅರುಣ ಜೋಶಿ, ಎಂ.ಆರ್. ಪಾಟೀಲ, ವಿಶೇಷ ಕಾರ್ಯದರ್ಶಿ ಎಸ್.ಬಿ. ಹಿಂಚಿಗೇರಿ, ಡಾ. ಎಸ್. ರಾಧಾಕೃಷ್ಣನ್, ಡಾ. ಆನಂದ ಕುಲಕರ್ಣಿ, ಡಾ. ಶಶಿಧರ ಹೊಂಬಳ, ಸಂಸ್ಥೆ ಸಿಬ್ಬಂದಿ, ಶಿಕ್ಷಕರು, ಇತರರು ಇದ್ದರು.