

ಚಿತ್ರದುರ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗದ ರಸ್ತೆಯ ಗಣೇಶ ದೇಗುಲ ಸಮೀಪ ಎರಡಂತಸ್ತಿನ ಮನೆಯ ನೆಲ ಮಹಡಿಯೊಳಗೆ ಬೆಂಕಿ ಹೊತ್ತಿ ಉರಿದಿದ್ದು, 3.5 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಶುಕ್ರವಾರ ನಡೆದಿದೆ.
ಶಿವಕುಮಾರ್ ಎಂಬುವವರಿಗೆ ಸೇರಿದ ಮನೆಯಲ್ಲಿ ಅವಘಡ ಸಂಭವಿಸಿದ್ದು, ಆಕಸ್ಮಿಕವಾಗಿ ಬೆಂಕಿ ತಗುಲಿದೆ ಎನ್ನಲಾಗಿದೆ. ಈ ಘಟನೆಯಿಂದ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮಷಿನ್, ಸೋಫಾ, ಅಡುಗೆ ಕೋಣೆಯಲ್ಲಿದ್ದ ಬಹುತೇಕ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಸ್ಮವಾಗಿವೆ.
ಇನ್ನೂ ಶಿವಕುಮಾರ್ ಕುಟುಂಬ ದೇವರ ದರ್ಶನಕ್ಕಾಗಿ ಹೊಸದುರ್ಗ ತಾಲೂಕಿನ ಹಾಲುರಾಮೇಶ್ವರ ಪುಣ್ಯ ಕ್ಷೇತ್ರಕ್ಕೆ ಹೋಗಿದ್ದರು ಎಂಬ ಮಾಹಿತಿ ಇದ್ದು, ಆ ವೇಳೆ ಘಟನೆ ನಡೆದಿದೆ.
ವಿಷಯ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯಲ್ಲಿದ್ದ ಮೂರು ಅಡುಗೆ ಅನಿಲಗಳನ್ನು ಸುರಕ್ಷಿತವಾಗಿ ಹೊರಗೆ ತಂದಿದ್ದಾರೆ. ಇದರಿಂದಾಗಿ ಭಾರೀ ಪ್ರಮಾಣದ ಅವಘಡ ತಪ್ಪಿದಂತಾಗಿದೆ.
ಪ್ರಭಾರ ಅಗ್ನಿಶಾಮಕ ಠಾಣಾಧಿಕಾರ ಕೆ.ರಾಮಕೃಷ್ಣಪ್ಪ, ಅಗ್ನಿಶಾಮಕರಾದ ಎಸ್.ಸುನೀಲ್, ಕಾಂತರಾಜ್, ಹರೀಶ್, ಚಾಲಕ ಶಂಕ್ರಪ್ಪ ಗುರುಬಸಣ್ಣನವರ್ ಕಾರ್ಯಾಚರಣೆ ನಡೆಸಿದ್ದು, ಇದರಿಂದಾಗಿ ಮನೆಯ ಸುತ್ತಮುತ್ತಲಿನ ಕೋಟ್ಯಂತರ ಮೌಲ್ಯದ ಆಸ್ತಿ-ಪಾಸ್ತಿ, ಜೀವಹಾನಿ ತಪ್ಪಿದಂತಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಚಿತ್ರದುರ್ಗದ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.