

ಹೊಳೆನರಸೀಪುರ: ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಪಟ್ಟಣದ ಚಕ್ಕೆ ಕಾರ್ಖಾನೆ ಬೀದಿಯ ನಿವಾಸಿ ಮಂಜು ಅವರ ಮನೆ ಸಂಪೂರ್ಣ ಜಲಾವೃತಗೊಂಡು ಮನೆಯೊಳಗಿದ್ದ ವಸ್ತುಗಳು ಹಾಳಾಗಿವೆ. ಮನೆಯೊಳಗೆ ಮಳೆ ನೀರು ತುಂಬಿಕೊಂಡು, ಹೊರ ಹೋಗಲು ಸ್ಥಳಾವಕಾಶವಿರದ ಕಾರಣ ಎಲ್ಲೆಡೆ ನೀರು ತುಂಬಿಕೊಂಡಿತ್ತು. ಪುಸ್ತಕಗಳು, ಬಟ್ಟೆಗಳು, ಹಾಸಿಗೆ ಸೇರಿದಂತೆ ಇತರ ಸಾಮಗ್ರಿಗಳು ನೀರಿನಲ್ಲಿ ತೊಯ್ದು ಹೋಗಿದ್ದು, ಮನೆಯಲ್ಲ ಕೆಸರು ಗದ್ದೆಯಂತಾಗಿತ್ತು. ಪುಸ್ತಕಗಳೆಲ್ಲ ನೀರಿನಲ್ಲಿ ಹಾಳಾಗಿದ್ದು ಕಂಡು ಮಕ್ಕಳು ಗೋಳಾಡುತ್ತಿದ್ದರು. ನಿದ್ರೆ ಇಲ್ಲದೆ ಮನೆಯವರೆಲ್ಲ ರಾತ್ರಿಯಿಡೀ ಕಾಲ ಕಳೆಯುವಂತಾಯಿತು. ಬೆಳಗ್ಗೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಮನೆಯೊಳಗಿದ್ದ ನೀರು ಹೊರ ಹಾಕುವ ಮೂಲಕ ಕುಟುಂಬದವರಿಗೆ ನೆರವಾದರು.