

ದಾವಣಗೆರೆ: ಹೆಚ್ಚುತ್ತಿರುವ ಪ್ಲಾಸ್ಟಿಕ್ ಕಸ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ಪ್ಲಾಸ್ಟಿಕ್ ನಿರ್ಮೂಲನೆ ಮನೆಗಳಿಂದಲೇ ಆರಂಭವಾಗಬೇಕು ಎಂದು ಪರಿಸರ ವಿಕಾಸ ಸಂಚಾಲಕ ಡಾ. ವಿವೇಕ್ ಜಿ ಭಿಡೆ ಹೇಳಿದರು.
ಭಾರತ ವಿಕಾಸ ಪರಿಷದ್, ಗೌತಮ ಶಾಖೆ, ಓಶೋ ಧ್ಯಾನ ಶಾಲೆ ಸಹಯೋಗದಲ್ಲಿ ಕೊಂಡಜ್ಜಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರಂಭದಲ್ಲಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಜನರಲ್ಲಿದ್ದ ಕುತೂಹಲ ನಂತರದ ವರ್ಷಗಳಲ್ಲಿ ಅನಿವಾರ್ಯ ಸೃಷ್ಟಿಸಿತು. ಲೋಟ, ತಟ್ಟೆ, ಕವರ್ ಎಲ್ಲದರಲ್ಲೂ ಪ್ಲಾಸ್ಟಿಕ್‌ಗೆ ಮಾರು ಹೋಗಿದ್ದೇವೆ. ಇವುಗಳಿಂದ ಉತ್ಪತ್ತಿಯಾಗುವ ವಿಷಪದಾರ್ಥದಿಂದ ನಮ್ಮ ಹಾಗೂ ಪರಿಸರದ ಆರೋಗ್ಯವೂ ಹಾಳಾಗುತ್ತಿದೆ ಎಂದರು.
ಮೊದಲೆಲ್ಲ ಮಣ್ಣಿನ ಮಡಕೆಯಲ್ಲಿ ಆಹಾರ ತಯಾರಿಸುವ ರೂಢಿಯಲ್ಲಿತ್ತು. ಕಡಿಮೆ ಸಮಯದಲ್ಲಿ ಅನ್ನ ಬೇಯಿಸಲು ಪ್ರೆಷರ್ ಕುಕ್ಕರ್‌ನಲ್ಲಿ ಅನ್ನ ಮಾಡುತ್ತಿದ್ದೇವೆ. ಇದರಿಂದ ಖನಿಜಾಂಶಗಳು ದೇಹವನ್ನು ಸೇರುತ್ತಿಲ್ಲ ಎಂದು ವಿಷಾದಿಸಿದರು.
ಭಾವಿಪ ದಕ್ಷಿಣ ಕ್ಷೇತ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಕೆ. ತಿಪ್ಪೇಸ್ವಾಮಿ ಮಾತನಾಡಿ ಸಂಸ್ಕಾರದಿಂದ ಬದಲಾವಣೆ ಸಾಧ್ಯವಿದೆ. ಭಾರತ ವಿಕಾಸ ಪರಿಷದ್ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಭಾರತ ವಿಕಾಸ ಪರಿಷದ್ ಗೌತಮ ಶಾಖೆ ದಾವಣಗೆರೆ ಅಧ್ಯಕ್ಷ ಡಾ. ಪ್ರಸಾದ್ ಬಂಗೇರ ಮಾತನಾಡಿ ಯಾವುದೇ ಆಚರಣೆಗಳು ಕೇವಲ ಸಾಂಕೇತಿಕವಾಗದೆ ರೂಢಿಸಿಕೊಂಡಾಗ ಉದ್ದೇಶ ಸಫಲವಾಗಲಿದೆ. ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ಸಂಘಟನೆ ಸದಸ್ಯರು ಇನ್ನು ಮುಂದೆ ಪ್ಲಾಸ್ಟಿಕ್ ತಟ್ಟೆ, ಲೋಟ ಬಳಸದೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಬಗೆಯ ಹಣ್ಣು, ಹೂವು, ಔಷಧ ಗುಣದ ಸಸಿಗಳನ್ನು ಓಶೋ ಧ್ಯಾನ ಶಾಲೆ ಆವರಣದಲ್ಲಿ ನೆಡಲಾಯಿತು.
ಕಾರ್ಯಕ್ರಮದಲ್ಲಿ ಓಶೋ ಧ್ಯಾನ ಶಾಲೆಯ ಶಿವಕುಮಾರ್, ನಟರಾಜ್ ಗುಪ್ತ, ಕರಿಬಸಪ್ಪ, ಪೃಥ್ವಿರಾಜ್, ಬಸವರಾಜ್ ಒಡೆಯರ್, ಮಧುಕರ್, ಹಿರೇಮಠ್ ಇತರರಿದ್ದರು.
ಭವಾನಿ ಶಂಭುಲಿಂಗಪ್ಪ-ಶೀಲಾ ನಾಯಕ್ ಪ್ರಾರ್ಥನೆ ಹಾಡಿದರು. ಎಸ್.ಆರ್. ಸಿದ್ದೇಶ್ ಕಾರ್ಯಕ್ರಮ ನಿರೂಪಿಸಿದರು. ಪೃಥ್ವಿರಾಜ್ ವಂದಿಸಿದರು.