

ಅನ್ಸಾರ್ ಇನೋಳಿ ಉಳ್ಳಾಲ
ಲಾಕ್‌ಡೌನ್ ಬಳಿಕ ಮಕ್ಕಳು ಶಾಲೆಯಿಂದ ದೂರವಾಗಿದ್ದು, ಅದರಲ್ಲೂ ಮುಸ್ಲಿಂ ಸಮುದಾಯ ಮಕ್ಕಳನ್ನು ಶಾಲೆಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನು ಗಮನಿಸಿ ಕೋಟೆಪುರ ಟಿಪ್ಪು ಸುಲ್ತಾನ್ ಶಾಲೆಯ ಶಿಕ್ಷಕರು ಮಕ್ಕಳ ಮನೆಗೇ ಹೋಗಿ ದಾಖಲಾತಿಗೆ ಮನವೊಲಿಸುವ ವಿಶಿಷ್ಟ ಪ್ರಯತ್ನದಲ್ಲಿ ತೊಡಗಿದ್ದಾರೆ.
ಕರೊನಾ ಬಳಿಕ ಮಕ್ಕಳು ಮನೆಯಲ್ಲೇ ಉಳಿದಿದ್ದು, ಅಂತರ್ಜಾಲ ಶಿಕ್ಷಣ ಹೇಳಿಕೊಳ್ಳುವಷ್ಟು ಪರಿಣಾಮ ಬೀರುತ್ತಿಲ್ಲ. ಒಂದನೇ ತರಗತಿಗೆ ಸೇರ್ಪಡೆಯಾಗುವ ವಯಸ್ಸೂ ಮೀರುತ್ತಿದೆ. ಮಕ್ಕಳು ಶಾಲೆಗೆ ಹೋಗುತ್ತೇವೆಂದರೂ ಪಾಲಕರ ಮನದ ಆತಂಕ ಅಡ್ಡಿಯಾಗುತ್ತಿದೆ. ಈ ಮಧ್ಯೆ ಗುರುವಾರ ಶಾಲಾ ಪ್ರಾರಂಭೋತ್ಸವ ನಡೆದಿದ್ದು ಮುಂದಕ್ಕೆ ಭೌತಿಕ ತರಗತಿಗಳು ನಡೆಯಲಿವೆ.
ಮಕ್ಕಳನ್ನು ಶಿಕ್ಷಣದತ್ತ ಸೆಳೆಯಬೇಕು ಎಂದು ಕೋಟೆಪುರ ಟಿಪ್ಪು ಸುಲ್ತಾನ್ ಶಾಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಣ್ಣ ಮಟ್ಟಿನ ಕಾರ್ಯಕ್ರಮ ಎಲ್ಲರನ್ನೂ ತಲುಪಬೇಕು ಎಂಬ ಉದ್ದೇಶ ಶಿಕ್ಷಕರದ್ದು. ಆಡಳಿತ ಮಂಡಳಿ ಗ್ರೀನ್‌ಸಿಗ್ನಲ್ ಕೂಡ ನೀಡಿತ್ತು. ಅದರಂತೆ ಅಂತರ್ಜಾಲದಲ್ಲಿ ಜೂಮ್ ಆ್ಯಪ್ ಮತ್ತು ಯೂಟ್ಯೂಬ್ ಬಳಸಲಾಯಿತು.
ಆ್ಯಪ್‌ನಲ್ಲಿ ಕಾರ್ಯಕ್ರಮ ವೀಕ್ಷಣೆ: ಶಾಲೆಯ ಹಳೇ ವಿದ್ಯಾರ್ಥಿಗಳು, ದೇಶ-ವಿದೇಶದಲ್ಲಿರುವ ಹಳೇ ವಿದ್ಯಾರ್ಥಿಗಳು, ಅಧಿಕಾರಿಗಳು, ಶಾಲಾಡಳಿತ ಮಂಡಳಿ, ಮಕ್ಕಳ ಪಾಲಕರು ಆ್ಯಪ್ ಮೂಲಕ ಕಾರ್ಯಕ್ರಮ ವೀಕ್ಷಿಸಿದ್ದಲ್ಲದೆ ತಮ್ಮ ಸಂದೇಶವನ್ನೂ ನೀಡಿದರು. ಶಾಲಾ ಮಟ್ಟದಲ್ಲಿ ಇಂಥದ್ದೊಂದು ಪ್ರಯೋಗ ಪ್ರಥಮ ಬಾರಿ ನಡೆಸುತ್ತಿರುವುದರಿಂದ ಆರಂಭದಲ್ಲಿ ಅಂತರ್ಜಾಲ ಸಮಸ್ಯೆಯೂ ಎದುರಾಗಿ, ಅಧಿಕಾರಿಗಳ ಸಂಪರ್ಕ ಅಸಾಧ್ಯವಾಯಿತು. ನಂತರ ಎಲ್ಲವೂ ಸುಲಲಿತವಾಗಿ ನಡೆಯುವ ಮೂಲಕ ಇಲಾಖಾ ಮಟ್ಟದಲ್ಲೇ ಕಾರ್ಯಕ್ರಮ ಸೈ ಎನಿಸಿಕೊಂಡಿತು.
ಪ್ರೌಢಶಾಲೆ ಮುಖ್ಯಶಿಕ್ಷಕ ಎಂ.ಎಚ್.ಮಲಾರ್ ಮುತುವರ್ಜಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂತರ್ಜಾಲ ಲೈವ್ ಮೂಲಕ ಉಳ್ಳಾಲ ನಗರಸಭಾ ಪೌರಾಯುಕ್ತ ರಾಯಪ್ಪ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಡಾ.ಪ್ರಶಾಂತ್ ಕುಮಾರ್, ಶಿಕ್ಷಣ ಸಂಯೋಜಕಿ ಗೀತಾ, ಶಿಕ್ಷಣಾಧಿಕಾರಿ ರಾಜೇಶ್ವರಿ ಕೆ., ಪಿಎಫ್‌ಐ ಅಧ್ಯಕ್ಷ ಯಾಸಿರ್ ಹಸನ್ ಸಂದೇಶ ನೀಡಿದರು. ಸಂಚಾಲಕ ಎ.ಕೆ.ಮೊಯಿದ್ದೀನ್, ಹಿರಿಯರಾದ ಹಮ್ಮಬ್ಬ, ಹಳೇವಿದ್ಯಾರ್ಥಿ ಸಮದ್, ಪ್ರಭಾರ ಮುಖ್ಯಶಿಕ್ಷಕಿ ಗೀತಾ ಡಿ.ಶೆಟ್ಟಿ, ಚಿತ್ರಕಲಾ ಶಿಕ್ಷಕ ರಫೀಕ್ ತುಂಬೆ ಉಪಸ್ಥಿತರಿದ್ದರು.
ಮುಸ್ಲಿಂ ಸಮುದಾಯವನ್ನು ಸುಶಿಕ್ಷಿತರನ್ನಾಗಿಸುವ ನಿಟ್ಟಿನಲ್ಲಿ ಹಿರಿಯರು ಸಾಕಷ್ಟು ಪ್ರಯತ್ನಪಟ್ಟು ಯಶಸ್ಸು ಸಾಧಿಸಿದ್ದಾರೆ. ಆದರೆ ಕರೊನಾ ನೆಪದಲ್ಲಿ ಮತ್ತೆ ಶಿಕ್ಷಣದಿಂದ ದೂರವಾಗುತ್ತಿರುವುದು ಸರಿಯಲ್ಲ. ಮುಂದಿನ ಜೀವನದ ದೃಷ್ಟಿಯಿಂದ ಯಾವುದೇ ಶಾಲೆಯಲ್ಲಾದರೂ ಶಿಕ್ಷಣ ಕೊಡಿಸಲು ಪಾಲಕರು ಮುಂದಾಗಬೇಕು. ಅಬ್ದುಲ್ ರಶೀದ್ ಅಧ್ಯಕ್ಷ, ಸಯ್ಯಿದ್ ಮದನಿ ದರ್ಗಾ ಶಾಲಾರಂಭ ಸಂಭ್ರಮಕ್ಕೆ ಕರೊನಾ ಅಡ್ಡಿಯಾಗಿದೆ. ಆದರೂ ಮಕ್ಕಳ ಮನಸ್ಥೈರ್ಯ ತುಂಬಿಸುವ ಕಾರ್ಯಕ್ರಮ ಇದಾಗಿದ್ದು, ಸಂಕಲ್ಪದ ದಿನವಾಗಿ ಪರಿಗಣಿಸಬೇಕು. ಪಾಲಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ಈ ಕಾರ್ಯಕ್ರಮ ದೊಡ್ಡ ಬದಲಾವಣೆ ತರಲು ನಾಂದಿಯಾಗಲಿದೆ. ಡಾ.ಪ್ರಶಾಂತ್ ಕುಮಾರ್ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ