ಬೇಲೂರು: ಮನೆಯಿಂದ ಹೊರ ಹೋಗಿದ್ದ ಕಾರ್ಮಿಕ ಮೂರು ದಿನಗಳ ಬಳಿಕ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತಾವರ ಗ್ರಾಮದ ಮಂಜುನಾಥ್ (30) ಮೃತರು. ಶನಿವಾರ (ಜು.8)ತೋಟದಲ್ಲಿ ಮರಗಸಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬಂದಿದ್ದರು. ಅಂಗಡಿಗೆ ಹೋಗಿ ಬೀಡಿ ತರುವುದಾಗಿ ಪತ್ನಿ ಸುಶೀಲಾಗೆ ಹೇಳಿ ಮನೆಯಿಂದ ರಾತ್ರಿ ಹೋದವರು ಎರಡು ದಿನಗಳಾದರೂ ವಾಪಸ್ ಬಂದಿರಲಿಲ್ಲ. ಕುಟುಂಬಸ್ಥರು ಮೊಬೈಲ್‌ಗೆ ಕರೆ ಮಾಡಿದರೂ ಸ್ವಿಚ್‌ಆಫ್ ಆಗಿತ್ತು. ಅಕ್ಕಪಕ್ಕದ ಗ್ರಾಮಗಳು, ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.
ಸೋಮವಾರ ಮಧ್ಯಾಹ್ನ ಕಿತ್ತಾವರ ಗ್ರಾಮದ ಶಂಕರ ಹಾಗೂ ದಿನೇಶ್ ಎಂಬುವರು ಹುಡುಕುತ್ತಿರುವಾಗ ಕಿತ್ತಾವರ ಕೆರೆಯಲ್ಲಿ ಮೃತದೇಹ ತೇಲುತ್ತಿದ್ದುದನ್ನು ಕಂಡು ಸಂಬಂಧಿಕರು, ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಅರೇಹಳ್ಳಿ ಠಾಣೆ ಪಿಎಸ್‌ಐ ಲಿಂಗರಾಜು ಮತ್ತು ಸಿಬ್ಬಂದಿ ಶವವನ್ನು ಹೊರ ತೆಗೆಸಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದರು. ನಂತರ ವಾರಸುದಾರರಿಗೆ ಶವ ನೀಡಲಾಯಿತು. ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ಪತ್ನಿ ಸುಶೀಲಾ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.