

ಗಂಡಸಿ: ಅರಸೀಕೆರೆ ತಾಲೂಕಿನ ಗಂಡಸಿ ಸಮೀಪದ ಜಕ್ಕನಹಳ್ಳಿ ಗ್ರಾಮದ ನಿವಾಸಿ ನಂಜುಂಡೇಗೌಡರ ತೋಟದ ಮನೆಯ ಮುಂದೆ ಕಟ್ಟಿದ್ದ ಮೇಕೆಯನ್ನು ಗುರುವಾರ ಸಂಜೆ 7 ಗಂಟೆ ಸಮಯದಲ್ಲಿ ಮನೆಯವರ ಮುಂದೆಯೇ ಚಿರತೆಯೊಂದು ದಾಳಿ ಮಾಡಿ ಹೊತ್ತೊಯ್ದಿದೆ.
ಸಂಜೆ 7 ಗಂಟೆ ಸಮಯದಲ್ಲಿ ಮನೆಯ ಮಂದಿಯೆಲ್ಲಾ ಹೊರಗೆ ಕುಳಿತ್ತಿದ್ದರು. ಈ ವೇಳೆ ಏಕಾಏಕಿ ಚಿರತೆ ಮೇಕೆ ಮೇಲೆ ದಾಳಿ ಮಾಡಿದೆ. ಇದನ್ನು ನೋಡುತ್ತಿದ್ದ ಮನೆಯವರು ಕಿರುಚಾಡಿದ್ದಾರೆ. ಅವರ ಕಣ್ಣ ಮುಂದೆಯೇ ಚಿರತೆ ಮೇಕೆಯನ್ನು ಹೊತ್ತು ಓಡಿದೆ.
ಜಕ್ಕನಹಳ್ಳಿ, ಮಹಾದೇವರಹಳ್ಳಿ, ಚನ್ನಾಪುರ, ಜಿ ಮಂಗಳಾಪುರ ಭಾಗದಲ್ಲಿ ನಾಲ್ಕು ಚಿರತೆಗಳು ಒಟ್ಟಿಗೆ ಕಾಣಿಸಿಕೊಳ್ಳುತ್ತಿವೆ. ಸುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ರೈತರು ರಾತ್ರಿ ವೇಳೆ ತಮ್ಮ ತೋಟ, ಹೊಲಗದ್ದೆಗಳಿಗೆ ಹೋಗುವುದಕ್ಕೆ ಭಯಭೀತರಾಗಿದ್ದಾರೆ. ಚಿರತೆ ಸೆರೆ ಬೋನು ಇಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಈಗಲಾದರೂ ಇಲಾಖೆಯವರು ಬೋನು ಇರಿಸಿ ಚಿರತೆಗಳನ್ನು ಹಿಡಿದು ತಮ್ಮ ದನ-ಕರುಗಳನ್ನು ರಕ್ಷಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುತ್ತಮುತ್ತಲ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.