ಮನೆಯಲ್ಲೇ ಕಾಲ ಕಳೆದ ಜನತೆ

24Manju2-Web
ಕೋವಿಡ್-19 ನಿಯಂತ್ರಣದ ಜಿಲ್ಲಾ ಮೇಲುಸ್ತುವಾರಿಯಾದ ಎಡಿಜಿಪಿ ಭಾಸ್ಕರ ರಾವ್ ಹಾಗೂ ನಗರ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್ ಅವರು ಬೆಳಗಾವಿ ನಗರದಲ್ಲಿ ಸಂಚರಿಸಿ ಭದ್ರತೆ ಪರಿಶೀಲನೆ ನಡೆಸಿದರು. ಡಿಸಿಪಿ ಯಶೋದಾ ವಂಟಗೋಡಿ ಇದ್ದರು.
Published on

ಬೆಳಗಾವಿ: ಕರೊನಾ ಸೋಂಕಿನ 2ನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಘೋಷಿಸಿರುವ ‘ವೀಕೆಂಡ್ ಲಾಕ್‌ಡೌನ್’ವನ್ನು ಶನಿವಾರ ಬೆಳಗಾವಿ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಯಿತು. ಸಂಚಾರ ವ್ಯವಸ್ಥೆ ಬಹುತೇಕ ಸ್ತಬ್ಧಗೊಂಡಿತ್ತು. ಆಟೋ, ಬಸ್ ಸಂಚಾರ ವಿರಳವಾಗಿತ್ತು. ಕರ್ಫ್ಯೂ ಉಲ್ಲಂಸಿ ರೋಡಿಗೆ ಇಳಿದವರಿಗೆ ಅಲ್ಲಲ್ಲಿ ಲಾಠಿ ಏಟು ಬಿತ್ತಲ್ಲದೆ, ದಂಡವನ್ನೂ ವಿಧಿಸಲಾಯಿತು.

ಸರ್ಕಾರವು ಏ. 22ರಿಂದಲೇ ಕರ್ಯ್ೂ ಜಾರಿಗೊಳಿಸಿದ್ದರಿಂದ ಹಾಗೂ ಶನಿವಾರ, ಭಾನುವಾರ ಎರಡು ದಿವಸ ‘ವೀಕೆಂಡ್ ಲಾಕ್‌ಡೌನ್’ ಘೋಷಿಸಿದ್ದರಿಂದ ಸರ್ಕಾರಿ, ಖಾಸಗಿ ನೌಕರರು ಮನೆಯಲ್ಲೇ ಠಿಕಾಣಿ ಹೂಡಿದ್ದರು. ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ, ಖಾಸಗಿ ಆಸ್ಪತ್ರೆಗಳ ತುರ್ತು ಘಟಕ ತೆರದುಕೊಂಡಿದ್ದರೆ, ಖಾಸಗಿ ಕ್ಲಿನಿಕ್‌ಗಳು ಸಂಪೂರ್ಣ ಬಂದ್ ಆಗಿದ್ದವು. ಹಾಲು, ಔಷಧ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

ವಾಹನ ಸವಾರರಿಗೆ ದಂಡ: ಬೆಳಗಾವಿ ನಗರದಲ್ಲಿ ಶನಿವಾರ ಬೆಳಗ್ಗೆಯಿಂದ ಸಂಜೆ 4ರ ವರೆಗೆ ಕೋವಿಡ್-19 ಸಂಚಾರ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದ 15 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಅಲ್ಲದೆ, ಮಾಸ್ಕ್ ಇಲ್ಲದೆ ಓಡಾಡುತ್ತಿದ್ದ 50ಕ್ಕೂ ಅಧಿಕ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದರು. ಕೆಲ ರಸ್ತೆ ಮಾರ್ಗಗಳನ್ನು ಬಂದ್ ಮಾಡಿದ್ದರಿಂದ ಅಲ್ಲಲ್ಲಿ ವಾಹನಗಳ ತಪಾಸಣೆ ವೇಳೆ ಕೆಲ ಸಮಯ ಸಂಚಾರ ದಟ್ಟಣೆ ಉಂಟಾಯಿತು.

ಸಿಪಿಐ ಮಾನವೀಯತೆ: ವೀಕೆಂಡ್ ಲಾಕ್‌ಡೌನ್ ಕಾರಣದಿಂದಾಗಿ ತರಕಾರಿ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿದ್ದರಿಂದ ನಗರದಲ್ಲಿ ಬಿಡಾಡಿ ದನಗಳು ಶನಿವಾರ ಆಹಾರ ಇಲ್ಲದೆ ಅಲೆದಾಡುತ್ತಿದ್ದವು. ಪ್ರತಿದಿನ ಹೋಟೆಲ್‌ಗಳ ಮಾಲೀಕರು, ತರಕಾರಿ ವ್ಯಾಪಾರಿಗಳು ನೀಡುತ್ತಿದ್ದ ಆಹಾರ ತಿನ್ನುತ್ತಿದ್ದವು. ಆದರೆ, ಲಾಕ್‌ಡೌನ್‌ನಿಂದಾಗಿ ಶನಿವಾರ ಆಹಾರ ಸಿಗದೆ ಅನೇಕ ಹಸುಗಳು ಮೂಕವೇದನೆ ಅನುಭವಿಸುತ್ತಿದ್ದವು. ಈ ವೇಳೆ ಮಾರ್ಕೆಟ್ ಠಾಣೆಯ ಸಿಪಿಐ ಸಂಗಮೇಶ ಶಿವಯೋಗಿ ಅವರು ಹಸುಗಳಿಗೆ ಬಾಳೆಹಣ್ಣು ತರಿಸಿ ತಿನ್ನಿಸುವ ಮೂಲಕ ಮಾನವೀಯತೆ ಮೆರೆದರು.

ಅನೇಕ ಮಾರ್ಗಗಳ ಬಸ್ ಸಂಚಾರ ಬಂದ್

ವೀಕೆಂಡ್ ಲಾಕ್‌ಡೌನ್‌ನಲ್ಲಿಯೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಯ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದಲ್ಲಿ ಎಂದಿನಂತೆ ಸಾರಿಗೆ ಬಸ್‌ಗಳು ಸಂಚಾರ ನಡೆಸಿದವು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಬಾರದಿರುವ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ವೇಳೆಗೆ ಎಲ್ಲ ಮಾರ್ಗಗಳ ಬಸ್‌ಗಳನ್ನು ಬಂದ್ ಮಾಡಲಾಯಿತು. ಅಲ್ಲದೆ, ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಎರಡು ಗಂಟೆಗೆ ಒಂದೊಂದು ಬಸ್ ಬಿಡಲಾಯಿತು. ತಾಲೂಕು ಕೇಂದ್ರ ಸ್ಥಾನದಿಂದ ಹಳ್ಳಿಗಳಿಗೆ ಎಂದಿನಂತೆ ಬಸ್‌ಗಳು ಸಂಚಾರ ನಡೆಸಿದವು. ಆದರೆ, ಬಹುತೇಕ ಬಸ್‌ಗಳಲ್ಲಿ ಪ್ರಯಾಣಿಕರು ಇಲ್ಲದೆ ಸಂಚರಿಸುತ್ತಿರುವುದು ಕಂಡು ಬಂತು.

ಲಾಕ್‌ಡೌನ್‌ನಲ್ಲೂ ಕಾರ್ಮಿಕರ ಕೆಲಸ

ಬೆಳಗಾವಿ ನಗರದ ಹಳೆ ಪಿಬಿ ರಸ್ತೆ, ಮಾರುಕಟ್ಟೆ, ಕೇಂದ್ರ ಬಸ್ ನಿಲ್ದಾಣ, ಕಾಲೇಜ್ ರಸ್ತೆ, ಕಾಕತಿ ರಸ್ತೆ, ಬಸವೇಶ್ವರ ವೃತ್ತ ಸೇರಿದಂತೆ ವಿವಿಧ ಭಾಗಗಳಲ್ಲಿ ಸ್ಮಾರ್ಟ್ ಸಿಟಿ, ಬಿಎಸ್‌ಎನ್‌ಎಲ್ ಕೇಬಲ್ ದುರಸ್ತಿ ಕಾಮಗಾರಿಗಳು ಎಂದಿನಂತೆ ನಡೆದವು. ಪಾಲಿಕೆ ಕಾರ್ಮಿಕರು ನಗರದ ಸ್ವಚ್ಛತಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಮಧ್ಯಾಹ್ನದ ಬಳಿಕ ಎಲ್ಲ ಕಾಮಗಾರಿಗಳನ್ನೂ ಅರ್ಧದಲ್ಲಿಯೇ ಮೊಟಕುಗೊಳಿಸಿ ಕಾರ್ಮಿಕರು ವಾಪಸ್ ಮನೆಗಳತ್ತ ಹೆಜ್ಜೆ ಹಾಕಿದರು.

ಕರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ವೀಕೆಂಡ್ ಲಾಕ್‌ಡೌನ್, ಇನ್ನುಳಿದ ದಿನಗಳಲ್ಲಿ ಕರ್ಯ್ೂ ಘೋಷಣೆ ಮಾಡಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಅನವಶ್ಯಕವಾಗಿ ಓಡಾಡುವುದು ಸರಿಯಲ್ಲ. ತುರ್ತು ಕೆಲಸಗಳು ಇದ್ದರೆ ಅಥವಾ ಆಸ್ಪತ್ರೆಗಳಿಗೆ ಹೋಗುವುದಿದ್ದರೆ ಮಾತ್ರ ಮಾಸ್ಕ್ ಹಾಕಿಕೊಂಡು ಬರಬೇಕು. ಸಿಗರೇಟ್, ತಂಬಾಕು, ಮದ್ಯ ಸೇವನೆ ಇನ್ನಿತರ ಕಾರಣಕ್ಕಾಗಿ ಅನಗತ್ಯವಾಗಿ ಓಡಾಡಿದರೆ ಬಿಸಿ ಮುಟ್ಟಿಸಬೇಕಾಗುತ್ತದೆ. ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಎಲ್ಲ ನಾಗರಿಕರೂ ಪಾಲಿಸಬೇಕು.| ಭಾಸ್ಕರ ರಾವ್. ಎಡಿಜಿಪಿ, ಕೋವಿಡ್-19 ನಿಯಂತ್ರಣದ ಜಿಲ್ಲಾ ಮೇಲುಸ್ತುವಾರಿವಿಮಾನ, ಬಸ್ ಹಾಗೂ ರೈಲ್ವೆ ನಿಲ್ದಾಣಗಳಿಗೆ ಹೋಗುವವರು ಟಿಕೆಟ್ ತೋರಿಸಬೇಕು. ಮದುವೆ ಅಥವಾ ಇನ್ನಿತರ ಸಮಾರಂಭಗಳಿಗೆ ಸ್ವಂತ ವಾಹನ ಅಥವಾ ಬಾಡಿಗೆ ವಾಹನದಲ್ಲಿ ಹೋಗುವವರು ಜಿಲ್ಲಾಡಳಿತದ ಅನುಮತಿ ತೆಗೆದುಕೊಳ್ಳಬೇಕು. 144ನೇ ಕಲಂ ಜಾರಿಯಲ್ಲಿರುವುದರಿಂದ ಜನರು ಗುಂಪು ಗುಂಪಾಗಿ ಓಡಾಡಬಾರದು. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಎಫ್‌ಆರ್‌ಐ ದಾಖಲು ಮಾಡಲಾಗುವುದು.| ಡಾ. ಕೆ.ತ್ಯಾಗರಾಜನ್. ನಗರ ಪೊಲೀಸ್ ಆಯುಕ್ತ, ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net