ಮನೆಯಲ್ಲೇ ಪ್ರಾರ್ಥಿಸಿದ ಮುಸ್ಲಿಮರು

25-hvr-03
Published on

ಹಾವೇರಿ: ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್​ನನ್ನು (ಈದ್ ಉಲ್ ಫಿತರ್) ಕರೊನಾ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲದ್ದರಿಂದ ಸೋಮವಾರ ಮನೆಯಲ್ಲಿಯೇ ಕುಟುಂಬದವರೆಲ್ಲ ಸೇರಿಕೊಂಡು ಸರಳವಾಗಿ ಆಚರಿಸಿದರು.

ದಾನಧರ್ಮಗಳ ಹಾಗೂ ಮಾನವ ಮೈತ್ರಿ ಸಂದೇಶ ಸಾರುವ, ಪರಸ್ಪರ ಬಾಂಧವ್ಯ, ಸಹೋದರತ್ವದ ರಂಜಾನ್ ಹಬ್ಬವನ್ನು ಪ್ರತಿವರ್ಷ ಮುಸ್ಲಿಮರು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಸಾಮೂಹಿಕ ಪ್ರಾರ್ಥನೆ ಮೂಲಕ ಆಚರಿಸುತ್ತಿದ್ದರು. ನಿಷೇಧಾಜ್ಞೆಯ ಹಿನ್ನೆಲೆಯಲ್ಲಿ ಹಬ್ಬಕ್ಕೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಿದ್ದರೂ ಮನೆಯಲ್ಲಿಯೇ ಹಬ್ಬ ಆಚರಣೆಗೆ ಯಾವುದೇ ತೊಂದರೆಯಿರಲಿಲ್ಲ. ಹೀಗಾಗಿ ಅನೇಕರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ ಹಬ್ಬ ಆಚರಿಸಿದರು. ಇನ್ನು ಕೆಲವರು ಈದ್ಗಾ ಮೈದಾನಕ್ಕೆ ಆಗಮಿಸಲು ಯತ್ನಿಸಿದರೂ ಪೊಲೀಸರು ಅವಕಾಶ ನೀಡಲಿಲ್ಲ.

ಮನೆಯಲ್ಲಿಯೇ ಹೊಸಬಟ್ಟೆಗಳನ್ನು ಧರಿಸಿಕೊಂಡು ಪರಸ್ಪರ ಆಲಿಂಗನ, ಹಸ್ತಲಾಘವದಿಂದ ಪರಸ್ಪರ ಶುಭಕೋರಿದರು. ಒಂದು ತಿಂಗಳ ಕಠಿಣ ಉಪವಾಸ ಆಚರಣೆಯ ನಂತರ ಚಂದ್ರದರ್ಶನ ಆಧಾರದಲ್ಲಿ ಸೋಮವಾರ ಹಬ್ಬ ಆಚರಿಸಲಾಯಿತು. ಮಧ್ಯಾಹ್ನ ಸೂರಕುಂಬಾ, ಬಿರಿಯಾನಿ ಸೇರಿ ಬಗೆಬಗೆಯ ಆಹಾರ ಸೇವಿಸಿದರು. ತಮ್ಮ ಆಪ್ತರನ್ನು ಮನೆಗೆ ಕರೆದು ಭೋಜನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net