ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ

3HLY-2((Alim Basarikatti-
Published on

ಹಳಿಯಾಳ: ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್ ಡೌನ್ ಮಾಡಿದ ಹಿನ್ನಲೆಯಲ್ಲಿ ಮುಸ್ಲಿಮರು ಮಸೀದಿಯ ಬದಲು ತಮ್ಮ ಮನೆಗಳಲ್ಲಿಯೇ ನಮಾಜ್ ಮಾಡಬೇಕು ಎಂದು ಹಳಿಯಾಳ ತಾಲೂಕು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಲಿಂ ಬಸರಿಕಟ್ಟಿ ಮನವಿ ಮಾಡಿದ್ದಾರೆ.

ಕರೊನಾ ವೈರಸ್ ಇಡೀ ಜಗತ್ತನ್ನು ವ್ಯಾಪಿಸಿದ್ದು, ನಮ್ಮ ದೇಶದಲ್ಲಿಯೂ ಈಗ ಕಾಲಿರಿಸಿದೆ. ಈ ಕರೊನಾ ವಿರುದ್ಧ ನಾವೆಲ್ಲರೂ ಸೇರಿ ಹೋರಾಟ ನಡೆಸಬೇಕಾಗಿದೆ. ಈ ರೋಗದ ನಿಯಂತ್ರಣ ನಮ್ಮ ಕೈಯಲ್ಲಿದೆ. ಕರೊನಾ ಸೋಲಿಸಲು ನಾವು ಮನೆಯಲ್ಲಿರೋಣ, ಮನೆಯಲ್ಲಿದ್ದು ನಮ್ಮ ಕುಟುಂಬ, ಸಮಾಜ ದೇಶವನ್ನು ಸಂರಕ್ಷಿಸೋಣ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ನಿರ್ದೇಶನ ಹಾಗೂ ಮಾರ್ಗದರ್ಶನ ನೀಡುವವರೆಗೊ ಮಸೀದಿಯ ಬದಲು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ನಮ್ಮ ಸಂರಕ್ಷಣೆಗಾಗಿ ಪ್ರಾಣ ರಕ್ಷಣೆಗಾಗಿ ದಿನದ ಇಪ್ಪತ್ತನಾಲ್ಕು ಗಂಟೆ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ತಾಲೂಕಾಡಳಿತ, ಪುರಸಭೆ, ಜಿಲ್ಲಾಡಳಿತ, ತಾಪಂ, ಗ್ರಾಪಂಗಳು ಕೈಗೊಳ್ಳುವ ಕಾರ್ಯಗಳಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ.

ನಮಾಜ್​ಗೆ ಬರದಂತೆ ಮೌಲಾನಾಗಳಿಂದ ಸಂದೇಶ
ಕಾರವಾರ:
ಮಸೀದಿಗಳಿಗೆ ನಮಾಜ್​ಗೆ ಬರದಂತೆ ಮೌಲಾನಾಗಳ ಸಂದೇಶವನ್ನು ವಿಡಿಯೋ ಮಾಡಿ ಎಲ್ಲೆಡೆ ಹರಿಬಿಡುವ ಮೂಲಕ ಜನ ಸಂದಣಿಯನ್ನು ತಡೆಯಲು ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
ಕರೊನಾ ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ ನಡೆಸದಂತೆ ಈಗಾಗಲೇ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅದರ ಹೊರತಾಗಿಯೂ ಕೆಲವರು ಮಸೀದಿಗಳಿಗೆ ತೆರಳಿ ಪ್ರಾರ್ಥನೆ ನಡೆಸಲು ಮುಂದಾಗಿರುವ ಘಟನೆ ಜಿಲ್ಲೆಯಲ್ಲಿ ಕಂಡುಬಂದಿತ್ತು. ಈ ಸಂಬಂಧ ಪ್ರಕರಣವೂ ದಾಖಲಾಗಿದೆ. ಶುಕ್ರವಾರ ಕೂಡ ಪ್ರಾರ್ಥನೆಗೆ ಜನ ಸೇರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಎಲ್ಲ ಮಸೀದಿಗಳ ಎದುರು ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಅಲ್ಲದೆ, ಮಸೀದಿಗೆ ಬರಬೇಡಿ ಮನೆಯಲ್ಲೇ ಪ್ರಾರ್ಥನೆ ಮಾಡಿ ಎಂಬ ಸಂದೇಶವಿರುವ ಭಟ್ಕಳದ ಜಾಮಿಯಾ ಮಸ್ಜಿದ್​ನ ಮೌಲಾನಾ ಅಬ್ದುಲ್ ಅಲೀಮ್ ಖತೀಬ್ ನದ್ವಿ ಹಾಗೂ ಜಿಲ್ಲೆಯ ಎಲ್ಲ ಪ್ರಮುಖ ಮಸೀದಿಗಳ ಮೌಲಾನಾಗಳ ಹೇಳಿಕೆ, ವಿಡಿಯೋಗಳನ್ನು ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net