ಮನೆಯಲ್ಲಿ ಯೋಗ ಸುಯೋಗ

21CBP1b (1)
Published on

ಚಿಕ್ಕಬಳ್ಳಾಪುರ: ಮನೆ ಸೇರಿ ವಿವಿಧೆಡೆ ಪರಸ್ಪರ ಅಂತರ ಕಾಪಾಡಿಕೊಂಡು ಯೋಗಾಭ್ಯಾಸ ಮಾಡುವ ಮೂಲಕ ಭಾನುವಾರ ವಿಶ್ವ ಯೋಗ ದಿನ ಆಚರಿಸಲಾಯಿತು.

ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಒಂದೆಡೆ ಸೇರುವುದನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಮೈದಾನಗಳಲ್ಲಿ ಸಾಮೂಹಿಕ ಯೋಗಾಭ್ಯಾಸ ನಡೆಯಲಿಲ್ಲ. ಇದರ ನಡುವೆ ವಿವಿಧೆಡೆ ಕನಿಷ್ಠ ಸಂಖ್ಯೆಯಲ್ಲಿ ಆತ್ಮೀಯರು, ಕುಟುಂಬದ ಸದಸ್ಯರು, ನೆರೆಹೊರೆಯವರೊಂದಿಗೆ ಸೇರಿ ಯೋಗಾಭ್ಯಾಸ ಮಾಡುವ ಮೂಲಕ ಮನೆಯಲ್ಲಿಯೇ ಯೋಗ, ಕುಟುಂಬದ ಸದಸ್ಯರೊಂದಿಗೆ ಯೋಗ ಎಂಬ ಸಂದೇಶ ಸಾರಲಾಯಿತು.

ಪತಂಜಲಿ ಯೋಗ ಸಮಿತಿ ಸದಸ್ಯರು ಚಿಕ್ಕಬಳ್ಳಾಪುರ ತಾಲೂಕಿನ ಗೋಪಿನಾಥ ಬೆಟ್ಟದಲ್ಲಿ, ನಂದಿ ಭಾಗದ ಸ್ಥಳೀಯರು ಕಣಿವೆ ಬಸವಣ್ಣ ದೇಗುಲ ಮುಂಭಾಗ, ಪರಿಸರ ಸ್ನೇಹಿ ಯುವಕ ತಂಡ ಎಂ.ಜಿ.ರಸ್ತೆಯಲ್ಲಿನ ಮನೆಯಲ್ಲಿ ಯೋಗ ಮಾಡುವ ಮೂಲಕ ಗಮನ ಸೆಳೆಯಿತು. ಹಲವರು ಮನೆಯಲ್ಲಿಯೇ ಯೋಗ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.

ಬೆಳಗ್ಗೆ 6ಕ್ಕೆ ಸೇರಿದ ಯೋಗಪಟುಗಳು ಓಂಕಾರ ಮಂತ್ರ ಜಪಿಸುವ ಮೂಲಕ ಯೋಗಾಭ್ಯಾಸಕ್ಕೆ ಚಾಲನೆ ನೀಡಿದರು. ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ವಿವಿಧ ಆಸನಗಳನ್ನು ಮಾಡುವುದರ ಜತೆಗೆ ಪ್ರತಿಯೊಂದು ಆಸನದ ಪರಿಚಯ, ಮಹತ್ವ ಮತ್ತು ವಿವಿಧ ಹಂತಗಳನ್ನು ತಿಳಿದುಕೊಂಡರು.

ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಪರಸ್ಪರ ಅಂತರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಯೋಗಪಟುಗಳು ಮನೆಯಿಂದಲೇ ನೆಲ ಹಾಸಿಗೆ ಬಟ್ಟೆ, ನೀರು ತಂದಿದ್ದರು, ಮುಂಜಾಗ್ರತಾ ಕ್ರಮವಾಗಿ ಪಾನೀಯಾ, ತಿಂಡಿ ತಿನಿಸುಗಳ ವ್ಯವಸ್ಥೆ ಇರಲಿಲ್ಲ.

ಯೋಗದಿನಂದು ಸಸಿ ನೆಡುವಿಕೆ: ವಿಶ್ವ ಯೋಗ ದಿನದಂದು ಹಸಿರು ಸಂಘದವರು ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಮರಳು ಸಿದ್ದೇಶ್ವರಸ್ವಾಮಿ ದೇವಾಲಯ ಮುಂಭಾಗ ಸೇರಿ ವಿವಿಧೆಡೆ ಸಸಿಗಳನ್ನು ನೆಟ್ಟರು. ನಗರಸಭೆ ಅಭಿಯಂತ ಶ್ರೀನಾಥ್, ಸಂಘದ ಪದಾಧಿಕಾರಿಗಳಾದ ಮಹಾಂತೇಶ್ ಕಾಟಾಪೂರಮಠ, ಮಧು, ರಂಜಿತ್, ಸಂತೀಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net