

ಹಾಸನ: ಚನ್ನರಾಯಪಟ್ಟಣ ತಾಲೂಕು ದಿಡಗ ಗ್ರಾಮದ ಮೋಹನ್‌ನಾಗ್‌ಎಂಬುವರ ಮನೆಯಲ್ಲಿ ಆ.15 ರಂದು 8.48 ಲಕ್ಷರೂ. ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೇಳಿದರು.
ಮೋಹನ್ ಎಂಬುವರು ಕೊಬ್ಬರಿ ಮಾರಿದ ಹಾಗೂ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣಕ್ಕಾಗಿ ಸಂಗ್ರಹಿಸಿಟ್ಟಿದ್ದ 8.48 ಲಕ್ಷರೂ. ಹಣವನ್ನು ಕದ್ದು ಪರಾರಿಯಾಗಿದ್ದ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ಬಡಗರಹಳ್ಳಿ ಗ್ರಾಮದ ಬಿ.ಎಸ್.ಚೇತನ (29) ಬಂಧಿತ ಆರೋಪಿ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೋಹನ್ ಅವರು ಆ.15 ರಂದು ತಮ್ಮ ಕುಟುಂಬದ ಸಮೇತ ನಾಗಮಂಗಲ ತಾಲ್ಲೂಕಿನಲ್ಲಿರುವ ಮುಳ್ಳಕಟ್ಟಮ್ಮ ದೇವಸ್ಥಾನಕ್ಕೆ ಹೋಗಿ ವಾಪಾಸ್ ಬಂದು ನೋಡಿದಾಗ ಮನೆಯಲ್ಲಿದ್ದ 8.48 ಲಕ್ಷರೂ. ಕಳುವಾಗಿತ್ತು. ಈ ಬಗ್ಗೆ ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಯನ್ನು ಬೆಂಗಳೂರಿನ ಚಿಕ್ಕಸಂದ್ರ ಬಸ್ ನಿಲ್ದಾಣದಲ್ಲಿ ಬಂಧಿಸಿ, ಆತ ಕಳವು ಮಾಡಿದ್ದ ಸಂಪೂರ್ಣ ಹಣ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಚೇತನ್, ಮೋಹನ್ ಅವರ ದೊಡ್ಡಮ್ಮನ ಮಗನಾಗಿದ್ದು, ಮನೆಯಲ್ಲಿ ಹಣ ಇರುವ ಬಗ್ಗೆ ಆತನಿಗೂ ಗೊತ್ತಿತ್ತು. ಮನರಯಲ್ಲಿ ಯಾರು ಇರುವುದಿಲ್ಲ ಎಂಬ ಮಾಹಿತಿ ತಿಳಿದು, ರಾತ್ರಿ ವೇಳೆ ಮನೆಯ ಹೆಂಚು ತೆಗೆದು ಒಳನುಗ್ಗಿದ ಆರೋಪಿ, ಹಣ ಕಳವು ಮಾಡಿಕೊಂಡು ಪರಾರಿಯಾಗಿದ್ದ.ಆರೋಪಿಯ ಚಲನವಲ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು ಎಂದು ಎಸ್‌ಪಿ ಮಾಹಿತಿ ನೀಡಿದರು.