

ಚನ್ನರಾಯಪಟ್ಟಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ನಡೆದಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯೋಜನೆಯ ಪಾತ್ರ ಬಹುಮುಖ್ಯ ಎಂದು ಸಿ.ಎನ್.ಶಶಿಧರ್ ಅಭಿಪ್ರಾಯ ಪಟ್ಟರು.
ಪಟ್ಟಣದ ಶ್ರೀ ರಾಘವೇಂದ್ರ ಕನ್ವೆನ್ಷನ್ ಹಾಲ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ, ಸಿ, ಟ್ರಸ್ಟ್ ಚನ್ನರಾಯಪಟ್ಟಣ ಹಾಗೂ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಸಬಾ ಬಿ ವಲಯ, ಇವರ ಸಹಯೋಗದಲ್ಲಿ. ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ನೂತನ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸಿ.ಎನ್.ಶಶಿಧರ್ ಭಾಗವಹಿಸಿದ್ದರು ಅವರು ಮಾತನಾಡಿ
ಕುಟುಂಬವನ್ನು ಪಾಲಿಸುವ, ಸಮಾಜವನ್ನು ಕಟ್ಟುವ ರಾಷ್ಟ್ರ ನಿರ್ಮಾಣದ ಹಿಂದಿನ ಅಗೋಚರ ಶಕ್ತಿ ಯಾವುದೆಂದರೆ ಅದು ಮಹಿಳೆಯೇ ಆಗಿರುತ್ತಾಳೆ. ಒಂದು ಕುಟುಂಬದ ಪ್ರತಿಬಿಂಬವೂ ಸಮಾಜವೆಂಬ ಕನ್ನಡಿಯಲ್ಲಿ ಸುಂದರವಾಗಿ ಗೋಚರವಾಗಬೇಕಾದರೆ, ಆ ಕುಟುಂಬದ ಮಹಿಳೆಯರು ಸ್ಫೂರ್ತಿಯ ಖನಿಯಾಗಿರಬೇಕು. ತಾಳ್ಮೆಯ ನೆಲೆಯಾಗಬೇಕು, ಮನೆಯ ಸದಸ್ಯರ ಬದುಕಿನ ಪುಟಗಳನ್ನು ಬರೆಯುವ ಲೇಖನಿಯಾಗಬೇಕು, ಭರತಖಂಡದಲ್ಲಿ ಅನಾದಿ ಕಾಲದಿಂದಲೂ ಸ್ತ್ರೀಯನ್ನು ಪೂಜನೀಯ ಸ್ಥಾನದಿಂದ ಗೌರವಿಸುತ್ತ ಬಂದಿರುತ್ತಾರೆ.
ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ನಾನಾ ಯೋಜನೆ, ಮಧ್ಯಪಾನ ಸೇರಿದಂತೆ ದುಶ್ಚಟಗಳನ್ನು ಬಿಡಿಸುವ ವಿನೂತನ ಕಾರ್ಯಕ್ರಮ, ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ಮಹಿಳೆಯರನ್ನು ಸಂಘಟಿಸುವ ಮೂಲಕ ಅವರು ಶಿಸ್ತಿನ ಜಿವನ ನಡೆಸಲು ಯೋಜನೆ ಸಹಕಾರ ನೀಡುತ್ತಿದೆ. ಯೋಜನೆ ಪ್ರಾರಂಭವಾದ ಬಳಿಕ ಸಮಾಜದಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳಾಗಿದ್ದು, ಮಹಿಳಾ ಸಬಲೀಕರಣವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ನಾನಾ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಗ್ರಾಮಾಭಿವೃದ್ದಿ ಯೋಜನೆ ರಾಜ್ಯದಲ್ಲೇ ಮಾದರಿಯಾಗಿದೆ ಎಂದು ತಿಳಿಸಿದರು.
ಸತ್ಯನಾರಾಯಣ ಪೂಜೆಯಲ್ಲಿ ವೀರೇಂದ್ರ ಹೆಗ್ಗಡೆ ದಂಪತಿ ಹೆಸರಲ್ಲಿ ಪೂಜಾ ಕೈಂಕರ್ಯಗಳನ್ನು ಜರುಗಿಸಲಾಯಿತು. ಸಂಘದ ಕೆಲವರು ಸತ್ಯ ನಾರಾಯಣ ಪೂಜೆಗೆ ಕುಳಿತು ತಮ್ಮಿಷ್ಟಗಳನ್ನು ಮುಂದಿಟ್ಟು ಮಂತ್ರಾಕ್ಷತೆಯೊಡನೆ ದೇವರಿಗೆ ಅರ್ಪಿಸಿದರು. ಈ ಕಾರ್ಯಕ್ರಮವು ನೆರೆದಿದ್ದ ಮಹಿಳಾಮಣಿಗಳ ಭಕ್ತಿ ಮತ್ತು ಸಾಂಸ್ಕೃತಿಕ ಒಗ್ಗೂಡಿಕೆಗೆ ವೇದಿಕೆಯಾಗಿತ್ತು.
ಕಾರ್ಯಕ್ರಮದಲ್ಲಿ ಎಂ.ಎಸ್.ಮೋಹನ್ ಧಾರ್ಮಿಕ ಉಪನ್ಯಾಸ ನೀಡಿದರು ಪುರಸಭಾ ಸದಸ್ಯೆ ರೇಖಾ ಅನಿಲ್ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಜನಜಾಗೃತಿ ಸದಸ್ಯ ಪ್ರಭಾಕರ್ ಶಣೈ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ನ ನಿರ್ದೇಶಕ ಮಹಾಬಲ ಕುಲಾಲ್, ಯೋಜನಾ ಅಧಿಕಾರಿ ಸುನೀತ ನಾಯಕ್ ಕಛೇರಿ ವ್ಯವಸ್ಥಾಪಕ ರಾಘವೇಂದ್ರ ಪೂಜಾರಿ, ಈಶ್ವರ, ಸ್ವ ಸಹಾಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.