

ಹಾಸನ: ನಗರದ ಕೆಎಚ್‌ಬಿ ಕಾಲೋನಿ, ಚನ್ನಪಟ್ಟಣ ಹೌಸಿಂಗ್ ಬೋರ್ಡ್‌ನಲ್ಲಿರುವ ಮನೆಯ ಬೀಗವನ್ನು ಒಡೆದು ಬೀರುವಿನಲ್ಲಿದ್ದ ನಗದು ಹಾಗೂ 1,29,400 ರೂ. ಮೌಲ್ಯದ ಚಿನ್ನಾಭರಣ ಕಳುವು ಮಾಡಲಾಗಿದೆ.
ಚನ್ನಪಟ್ಟಣ ಹೌಸಿಂಗ್ ಬೋರ್ಡ್ ನಿವಾಸಿ ಎನ್.ಕೆ. ಶಶಿಧರ ಅವರು, ಗುರುವಾರ ರಾತ್ರಿ ಎಂದಿನಂತೆ ಮನೆಯಲ್ಲಿ ಮಲಗಿದ್ದರು. ಪತ್ನಿಯ ತಾಯಿಯಾದ ಪೂರ್ಣಿಮಾ ಅವರಿಗೆ ಅನಾರೋಗ್ಯದ ಕಾರಣ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ರಾತ್ರಿ ಸುಮಾರು 12 ಗಂಟೆಗೆ ಮಾವನವರಾದ ರಾಮೇಗೌಡ ಅವರು ಶಶಿಧರ ಅವರಿಗೆ ಕರೆ ಮಾಡಿ ಆಸ್ಪತ್ರೆಗೆ ಬರಲು ಹೇಳಿದ್ದಾರೆ. ಮನೆಗೆ ಬೀಗ ಹಾಕಿಕೊಂಡು ಆಸ್ಪತ್ರೆಗೆ ಹೋಗಿ ಅವರನ್ನು ನೋಡಿಕೊಂಡು ವಾಪಸ್ ರಾತ್ರಿ ಸುಮಾರು 2.15 ಗಂಟೆಗೆ ಬಂದು ನೋಡಿದಾಗ ಮನೆಯ ಬಾಗಿಲು ಅಧರ್ ತೆರೆದಿತ್ತು. ಒಳಗೆ ಹೋಗಿ ನೋಡಿದಾಗ, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದು ಡ್ರೆಸಿಂಗ್ ಟೇಬಲ್ ಡ್ರಾಯರ್‌ನಲ್ಲಿದ್ದ 1,29,400 ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಕಳ್ಳರನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ಶಶಿಧರ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.