

ಹಾಸನ: ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಖದೀಮರು ಮನೆಯ ಬೀಗ ಮುರಿದು ಮನೆಯಲ್ಲಿದ್ದ 1.5 ಲಕ್ಷ ರೂ. ಮೌಲ್ಯದ ಚಿನ್ನಾಭರವಣವನ್ನು ಮಂಗಳವಾರ ಮಧ್ಯಾಹ್ನ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಹಾಸನ ತಾಲೂಕು, ಕಸಬಾ ಹೋಬಳಿ, ಮಣಿಚನಹಳ್ಳಿ ಗ್ರಾಮದ ನಿವಾಸಿ ಪಾರ್ಥಸಾರಥಿ ಅವರು ಮಂಗಳವಾರ ಮನೆಯ ಬೀಗ ಹಾಕಿಕೊಂಡು ಹೊರಗೆ ಹೋಗಿದ್ದರು. ಮಧ್ಯಾಹ್ನದ ಸಮಯದಲ್ಲಿ ಕಳ್ಳರು ಮನೆಯ ಬೀಗವನ್ನು ಮುರಿದು ಒಳಪ್ರವೇಶಿಸಿ, ಬೀರುವಿನಲ್ಲಿ ಇಟ್ಟಿದ್ದ 1.5 ಲಕ್ಷ ರೂ. ಮೌಲ್ಯದ ಒಂದು ಜೊತೆ ಚಿನ್ನದ ಓಲೆ, ಚೈನು, 2 ಉಂಗುರಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಪಾರ್ಥಸಾರಥಿ ಅವರು ಮನೆಗೆ ಹಿಂದಿರುಗಿ ಬಂದು ನೋಡಿದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ. ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಾರ್ಥಸಾರಥಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.