

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಕನ್ನಡ ಸಾಹಿತ್ಯ ಉತ್ಯುಂಗ್ಕಕ್ಕೇರಬೇಕು. ಈ ನಿಟ್ಟಿನಲ್ಲಿ ನಾಡಿನ ಮನೆಮನೆಗೂ ಕನ್ನಡ ಸಾಹಿತ್ಯ ತಲುಪಬೇಕು ಎಂದು ನೆಲಮಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬೈರನಹಳ್ಳಿ ಪ್ರಕಾಶ್ ಮೂರ್ತಿ ತಿಳಿಸಿದರು.
ನೆಲಮಂಗಲ ತಾಲೂಕಿನ ಸೋಂಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಸಾಪನಿಂದ ಆಯೋಜಿಸಿದ್ದ 50ರ ಕನ್ನಡ ಸಾಹಿತ್ಯ ಸಂಭ್ರಮ ಹಾಗೂ ಶಾಲೆಯಿಂದ ಶಾಲೆಗೆ ಸಾಹಿತ್ಯ ಸಂಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳಲ್ಲಿ ಭಾಷಾಭಿಮಾನ ಮೂಡಬೇಕು. ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೆ ಕಮ್ಮಿಇಲ್ಲ ಎಂಬಂತೆ ಮಕ್ಕಳಲ್ಲಿ ಹೆಚ್ಚುಹೆಚ್ಚು ನಾಡಾಭಿಮಾನ, ದೇಶಾಭಿಮಾನ, ಭಾಷಾಭಿಮಾನವನ್ನು ಬೆಳೆಸುವ ಕಾರ್ಯಮಾಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಸಾಪ ಗೌರವ ಕಾರ್ಯದರ್ಶಿ ಕೆ.ಬಿ.ಸದಾನಂದ ಆರಾಧ್ಯ ಮಾತನಾಡಿ, ಶಾಲೆಗಳಲ್ಲಿ ಹೆಚ್ಚು ಮಕ್ಕಳು ಕನ್ನಡದ ಪುಸ್ತಕಗಳನ್ನು ಓದಬೇಕು. ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸಿದ ಕವಿಗಳನ್ನು ಸ್ಮರಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ ಇದರಲ್ಲಿ ಎಲ್ಲ ಮಕ್ಕಳು ಸಕ್ರಿಯವಾಗಿ ಭಾಗವಹಿಸಬೇಕು ಎಂದರು. ಸಿದ್ಧಗಂಗಾ ಪ್ರಥಮ ದರ್ಜೆ ಪದವಿ ಕಾಲೇಜು ಪ್ರಾಧ್ಯಾಪಕ ಡಾ.ಗಂಗರಾಜು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ತಾಯಿ ಸ್ಥಾನ ಬಹುಮುಖ್ಯವಾಗಿದ್ದು, ಕನ್ನಡ ಭಾಷಾ ಪ್ರೇಮವನ್ನು ಹೆಚ್ಚು ಬೆಳೆಸಿಕೊಂಡಾಗ ನಮ್ಮ ನಾಡು, ನುಡಿ, ಸಂಸ್ಕೃತಿ ಬೆಳವಣಿಗೆಯಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಹೆಚ್ಚುಹೆಚ್ಚು ಕನ್ನಡ ಪುಸ್ತಕಗಳನ್ನು ಓದಬೇಕು. ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ನೆಲಮಂಗಲ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಹೊನ್ನ ಶಾಮಯ್ಯ, ಕಸಾಪ ಸೋಂಪುರ ಹೋಬಳಿ ಘಟಕದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿದರು.
ಚೆನ್ನಾಂಬ ಪ್ರಕಾಶನ ಮಾಲೀಕ ಭಾರತೀಪುರ ಕೆಂಪಣ್ಣನ ಶಾಲೆ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು.
ವೀರಸಾಗರ ಭಾನುಪ್ರಕಾಶ್, ನೆಲಮಂಗಲ ಕಸಾಪ ಗೌರವ ಕಾರ್ಯದರ್ಶಿ ಈಶ್ವರ ಆರ್.ಎಸ್.ಕುಮಾರಪ್ಪ ಭೂಮಿಕಾ ಸ್ಟುಡಿಯೋ, ಬೂದಿಹಾಲ್ ಕಿಟ್ಟಿ, ಹೊನ್ನೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್, ಮುಖ್ಯಶಿಕ್ಷಕ ಷಣ್ಮುಖಾಚಾರಿ, ಶಿಕ್ಷಕರಾದ ಸೌಭಾಗ್ಯಾ, ರಂಗಮೂರ್ತಿ ಈಶ್ವರಯ್ಯ.ಆರ್.ಎಸ್, ದೇವಿಕಾ ಎನ್, ಮಮತಾ, ಆನಂದಮೂರ್ತಿ, ನಂದೀಶ್, ಮೋಹನಕುಮಾರ್, ರೂಪಾ, ಸುಜಾತಾ ಬಿರಾದಾರ್, ಉಜ್ಮಾ ಪಾತಿಮಾ, ಸೌಮ್ಯಾ ಇದ್ದರು.