ಮನೆದೇವರ ದರ್ಶನ ಪಡೆದ ಚೆಲುವರಾಯಸ್ವಾಮಿ

15mlk-1
Published on

ಮೇಲುಕೋಟೆ: ಪಟ್ಟಣಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ-ಧನಲಕ್ಷ್ಮೀ ದಂಪತಿ ಮನೆ ದೇವರಾದ ಶ್ರೀ ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು.


ಮಂಡ್ಯದಲ್ಲಿ ಆಯೋಜಿಸಿದ್ದ ಸ್ವಾತಂತ್ರೋತ್ಸವದಲ್ಲಿ ಭಾಗಿಯಾಗಿ ಬಳಿಕ ಮೇಲುಕೋಟೆಗೆ ಆಗಮಿಸಿದ ಸಚಿವರು, ಯತಿರಾಜದಾಸರ್ ಸ್ಥಾನಾಚಾರ್ಯ ಶ್ರೀ ನಿವಾಸನರಸಿಂಹನ್ ಗುರೂಜಿ ಮಾರ್ಗದರ್ಶನದಲ್ಲಿ ಚೆಲುವನಾರಾಯಣನ ದರ್ಶನ ಪಡೆದರು. ಯದುಗಿರಿನಾಯಕಿ ಅಮ್ಮನವರಿಗೆ ವಾಡಿಕೆಯಂತೆ ಮಡಿಲು ತುಂಬಿದರು. ವಿಜಯಲಕ್ಷ್ಮೀ ಅಮ್ಮನವರ ದರ್ಶನವನ್ನೂ ಪಡೆದ ಸಚಿವ ದಂಪತಿ ಯೋಗಾನರಸಿಂಹಸ್ವಾಮಿ ಬೆಟ್ಟಕ್ಕೆ ತೆರಳಿ ನವಗ್ರಹರೂಪಿಯಾದ 9 ಮೆಟ್ಟಲುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಯೋಗನರಸಿಂಹಸಿಂಹನ ದರ್ಶನ ಪಡೆದರು. ದೇವಾಲಯಕ್ಕೆ ಆಗಮಿಸಿದ ಸಚಿವ ದಂಪತಿಯನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.


ಈ ವೇಳೆ ಮಾತನಾಡಿದ ಸಚಿವರು, ಮನೆ ದೇವರದರ್ಶನ ತೃಪ್ತಿನೀಡಿದೆ. ರಾಜಮಹಾರಾಜರು ಜೀರ್ಣೋದ್ಧಾರಗೊಂಡ ಮೇಲುಕೋಟೆಯಲ್ಲಿ ಭಕ್ತರ ಸ್ನೇಹಿಯಾಗಿ ಸೌಲಭ ಕಲ್ಪಿಸಲು ಚೆಲುವನಾರಾಯಣನೇ ಶಕ್ತಿ ನೀಡುತ್ತಾನೆ. ಮನೆ ದೇವರ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕೆಂಬ ಆಶಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಕೆ.ಪಿ.ಸಿ.ಸಿ ಸದಸ್ಯ ಹೆಚ್.ತ್ಯಾಗರಾಜು, ಉಪವಿಭಾಗಾಧಿಕಾರಿ ನಂದೀಶ್, ದೇಗುಲದ ಇಒ ಮಹೇಶ್, ಕಾಂಗ್ರೆಸ್ ಮುಖಂಡರಾದ ಕಾಡೇನಹಳ್ಳಿ ರಾಮಚಂದ್ರು, ಯೋಗನರಸಿಂಹೇಗೌಡ, ರೈತ ಸಂಘದ ತಾಲೂಕು ಉಪಾಧ್ಯಕ್ಷ ಈಶಮುರಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net