

ಭದ್ರಾವತಿ: ವಿವಿಧ ಇಲಾಖಾ ಅಕಾರಿಗಳ ಗೈರಾಗಿದ್ದರಿಂದ ಸಿಟ್ಟಿಗೆದ್ದ ಸದಸ್ಯರು ಬಹಿಷ್ಕರಿಸಿ ಹೊರನಡೆದು ಮುಂದೂಡಲ್ಪಟ್ಟಿದ್ದ ನಗರಸಭೆ ಸಾಮಾನ್ಯ ಸಭೆ ಗುರುವಾರ ನಡೆಯಿತು. ತಾಲೂಕು ಆಡಳಿತ ಸೇರಿ ವಿವಿಧ ಇಲಾಖಾ ಅಕಾರಿಗಳು ಸಭೆಯಲ್ಲಿ ಹಾಜರಿದ್ದು, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ನಗರಸಭೆ ಸದಸ್ಯರುಗಳೊಂದಿಗೆ ಚರ್ಚಿಸಿದರು.
ಚನ್ನಪ್ಪ ಮಾತನಾಡಿ, ಮಳೆಯಿಂದ ಮನೆಗಳಿಗೆ ಹಾನಿಯಾದಲ್ಲಿ ಯಾವ ರೀತಿಯಲ್ಲಿ ಅರ್ಜಿ ಹಾಕಬೇಕು. ಪರಿಹಾರ ನೀಡುವ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಕೇಳಿದರು.
ತಹಸೀಲ್ದಾರ್ ಪರುಸಪ್ಪ ಕುರುಬರ ಮಾತನಾಡಿ, ಮಳೆಯಿಂದ ಮನೆಗೆ ಹಾನಿಯಾದಲ್ಲಿ ಪರಿಹಾರ ಪಡೆಯಲು ಕಳೆದ ಬಾರಿಯಂತೆ ಅರ್ಜಿ ಸಲ್ಲಿಸಿದರೆ ಸಾಕು. ಆದರೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸುವ ಮನೆಯ ಯಜಮಾನ ಕನಿಷ್ಠ ಬಿ ಖಾತೆ ಹೊಂದಿರಬೇಕು. ನಷ್ಟದ ಅಂದಾಜು ಪರಿಶೀಲಿಸಿ ಪರಿಹಾರದ ನಿಗದಿಯಾಗುತ್ತದೆ ಎಂದರು.
ಮನೆ ಶೇ.75ಕ್ಕಿಂತ ಹೆಚ್ಚು ಹಾನಿಗೀಡಾಗಿದ್ದರೆ ಮಾತ್ರ ಪೂರ್ಣ ಪ್ರಮಾಣದ 2.40 ಲಕ್ಷ ರೂ. ಪಡೆಯಬಹುದು. ಅನಕೃತ ಮನೆಗಳಿಗೆ ಯಾವುದೇ ಪರಿಹಾರ ನೀಡುವುದಿಲ್ಲ. ಮನೆಯೊಳಗೆ ನೀರು ನಿಂತು ವಸ್ತುಗಳು ಹಾಳಾದರೆ ಮಾತ್ರ ಖಾತೆ ಇಲ್ಲದವರಿಗೂ ಪರಿಹಾರ ದೊರೆಯುತ್ತದೆ ಎಂದು ವಿವರಿಸಿದರು.
ಬಿ.ಕೆ.ಮೋಹನ್ ಮಾತನಾಡಿ, ಸರ್ಕಾರದಿಂದ ನಿಗದಿಯಾದ ಪರಿಹಾರದ ಹಣವನ್ನು ಕೊಡಲು ಸಂತ್ರಸ್ತರನ್ನು ಕಚೇರಿಗಳಿಗೆ ಅಲೆಸಬೇಡಿ. ನೊಂದಿರುವವರನ್ನು ಮತ್ತಷ್ಟು ನೋಯಿಸುವ ಕೆಲಸ ಮಾಡಬೇಡಿ ಎಂದು ತಿಳಿಸಿದರು.
ಜನ್ನಾಪುರ ಕೆರೆ ಕೆರೆ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ ಹಣ ಎಷ್ಟು, ಯಾವ ಯಾವ ಕೆರೆಗಳನ್ನು ಅಭಿವೃದ್ಧಿಪಡಿಸಿದ್ದೀರಿ, ಪಾರ್ಕ್‌ಗಳೆಷ್ಟು, ರಸ್ತೆಗಳೆಷ್ಟು ಎಂಬುದನ್ನು ಸಭೆಗೆ ತಿಳಿಸಿ ಎಂದು ನಗರಾಭಿವೃದ್ಧಿ ಪ್ರಾಕಾರದ ಎಇಇ ವೀರ ಗಂಗಾಧರಸ್ವಾಮಿ ಅವರನ್ನು ಪ್ರಶ್ನಿಸಿದರು.
ಪ್ರಶ್ನೆಗೆ ಉತ್ತರಿಸಿದ ಇಂಜಿನಿಯರ್, ಜನ್ನಾಪುರ ಕೆರೆ ಒತ್ತುವರಿ ತೆರವು ವಿಚಾರದಲ್ಲಿ ಸ್ವಲ್ಪ ತಡವಾಯಿತು. ಹಾಗಾಗಿ ಕಾಮಗಾರಿ ಟೆಂಡರ್ ಕರೆಯಲು ಸಾಧ್ಯವಾಗಲಿಲ್ಲ. ಈಗ ಹೊಸದಾಗಿ ಟೆಂಡರ್ ಕರೆದು ಅಭಿವೃದ್ಧಿಪಡಿಸಲಾಗುತ್ತಿದೆ. ಬೊಮ್ಮನಕಟ್ಟೆ ಟ್ರೀ ಪಾರ್ಕ್, ಗಾಂನಗರ ಪಾರ್ಕ್, ಉಜ್ಜನೀಪುರ ಕೆರೆಗಳ ಅಭಿವೃದ್ಧಿಗೆ ಸುಮಾರು 1.50 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ರೇಬೀಸ್ ಚುಚ್ಚುಮದ್ದು ಸರಬರಾಜು, ಉದ್ಯಾನವನ ಅಭಿವೃದ್ಧಿ, ಜಿ+ ತ್ರೀ ಮನೆಗಳ ಹಂಚಿಕೆ ಸೇರಿ ಚರ್ಚಿಸಲ್ಪಟ್ಟ 24 ವಿಚಾರಗಳಿಗೂ ಸಭೆ ಅನುಮೋದಿಸಿತು. ಅಧ್ಯಕ್ಷೆ ಗೀತಾರಾಜ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಉಪಾಧ್ಯಕ್ಷ ಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್ ಇತರರಿದ್ದರು.
ಎಲ್ಲರಿಗೂ ಹಕ್ಕುಪತ್ರ ಕೊಡಿ
ಕೊಳಚೆ ಪ್ರದೇಶದ ನಿವಾಸಿಗಳಿಗೆ 10 ವರ್ಷಗಳ ಹಿಂದೆ ಹಕ್ಕುಪತ್ರ ಕೊಡಲಾಗಿತ್ತು. ಆದರೆ ಇದುವರೆಗೆ ಉಳಿದ 2 ಸಾವಿರ ನಿವಾಸಿಗಳಿಗೆ ಸರ್ಕಾರದ ಆದೇಶವಿದ್ದರೂ ಹಕ್ಕುಪತ್ರ ನೀಡುತ್ತಿಲ್ಲ. ಕಾರಣ ಹೇಳದೆ ಎಂಪಿಎಂ ಭಾಗದ ಎಲ್ಲ ಸ್ಲಂ ನಿವಾಸಿಗಳಿಗೂ ಹಕ್ಕುಪತ್ರ ನೀಡುವಂತೆ ಸ್ಲಂಬೋರ್ಡ್ ಎಇಇ ಪ್ರಸನ್ನಕುಮಾರ್ ಅವರಿಗೆ ಬಿ.ಕೆ.ಮೋಹನ್ ತಾಕೀತು ಮಾಡಿದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದು ಸಂತೋಷದ ವಿಚಾರವಾದರೂ ಅದರಿಂದ ಜನರ ಮೇಲಾಗುತ್ತಿರುವ ತೊಂದರೆ ಸಾಕಷ್ಟಿದೆ. ಹುಡ್ಕೋ ಕಾಲನಿಯಲ್ಲಿ ಮನೆಗಳಿಗೆ ನೀರು ನುಗ್ಗುತ್ತಿದೆ. ಅಲ್ಲಿನ ಜನರು ಶಾಸಕರ ಮನೆಗೆ ರಾತ್ರೋರಾತ್ರಿ ಬರುತ್ತಾರೆ. ಮಳೆ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬೇಕು.
ಬಿ.ಕೆ.ಮೋಹನ್, ನಗರಸಭೆ ಸದಸ್ಯ