

ಹಾಸನ: ಮಧ್ಯಾಹ್ನದ ವೇಳೆಯಲ್ಲಿಯೇ ಮನೆಗೆ ನುಗ್ಗಿದ ಇಬ್ಬರು ಖದೀಮರು ಮನೆ ಒಡತಿಯ ಬಾಯಿಯನ್ನು ಮುಚ್ಚಿ ಅವರ ಕೊರಳಿನಲ್ಲಿ ಇದ್ದ 1.20 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಹಾಗೂ ಬೀರುವಿನಲ್ಲಿ ಇಟ್ಟಿದ್ದ 2.10 ಲಕ್ಷ ನಗದನ್ನು ದೋಚಿ ಪರಾರಿಯಾದ ಘಟನೆ ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಹೋಬಳಿಯ ಮಾಚಬೂವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸೋಮವಾರ ಮಧ್ಯಾಹ್ನ ಸುಮಾರು 12.30ರ ಸಮಯದಲ್ಲ ಮನೆಯ ಬಾಗಿಲು ತೆಗೆದು ಮನೆ ಒಡತಿ ಸ್ಪಂದನಾ ಅವರು ವಾಷಿಂಗ್ ಮಿಷನ್‌ಗೆ ಬಟ್ಟೆ ಹಾಕುತ್ತಿದ್ದರು. ಈ ಸಮಯದಲ್ಲಿ ತಮ್ಮ ಮನೆಯ ರೂಮಿನಿಂದ ಶಬ್ದವಾಗುತ್ತಿರುವುದು ಕೇಳಿಸಿದೆ. ಏನೆಂದು ನೋಡಲು ಹೋದಾಗ ಏಕಾಏಕಿ ಒಬ್ಬ ಸ್ಪಂದನಾ ಅವರ ಬಾಯಿಯನ್ನು ಕೂಗಾಡದಂತೆ ಹಿಡಿದುಕೊಂಡು ಕೊರಳಿನಲ್ಲಿದ್ದ 30 ಗ್ರಾಂ ತೂಕದ ಅಂದಾಜು 1,20,000 ರೂ. ಬೆಲೆಬಾಳುವ ಚಿನ್ನದ ಮಾಂಗಲ್ಯ ಸರವನ್ನು ಬಲವಂತದಿಂದ ಕಿತ್ತುಕೊಂಡಿದ್ದಾನೆ. ಮತ್ತೊಬ್ಬ ರೂಮಿನ ಬೀರುವಿನಲ್ಲಿಟ್ಟಿದ್ದ 2,10,000 ನಗದನ್ನು ಸುಲಿಗೆ ಮಾಡಿದ್ದಾನೆ. ಕಪ್ಪು ಬಟ್ಟೆ, ಮುಖಕ್ಕೆ ಮಾಸ್ಕ್ ಹಾಗು ತಲೆಗೆ ಮಂಕಿ ಟೋಪಿಯನ್ನು ಧರಿಸಿದ್ದ ಇಬ್ಬರೂ ಮನೆ ಒಡತಿ ಸ್ಪಂದನಾ ಅವರನ್ನು ತಳ್ಳಿ ಪರಾರಿಯಾಗಿದ್ದಾರೆ. ಅಪರಿಚಿತ ಸುಲಿಗೆಕೋರರನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ಸ್ಪಂದನಾ ಅವರು ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.