ಮನೆಗೆ ನುಗ್ಗಿ ದರೋಡೆ, ಮನೆ ಮಾಲೀಕರ ಮೇಲೆ ಹಲ್ಲೆ

image_6487327
Published on

ನಾಗಮಂಗಲ: ತಾಲೂಕಿನ ಬೆಳ್ಳೂರು ಹೋಬಳಿ ಚಾಮಲಾಪುರ ಗೇಟ್‌ನಲ್ಲಿ ಭಾನುವಾರ ಮುಂಜಾನೆ ಮನೆಗೆ ನುಗ್ಗಿದ ದರೋಡೆಕೋರರು ಮನೆ ಮಾಲೀಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.


ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚಾಮಲಾಪುರ ಗೇಟ್‌ನ ನಿವಾಸಿ ಮಂಜುನಾಥ್ ಅವರ ಮನೆಗೆ ಕಾರಿನಲ್ಲಿ ಬಂದಿದ್ದ ದರೋಡೆಕೋರರು ಮನೆಗೆ ನುಗ್ಗಿ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದಾರೆ. ಮನೆಯ ಬಾಗಿಲು ಮುರಿದು ಮನೆಗೆ ನುಗ್ಗಿರುವ ಮೂವರು ದರೋಡೆಕೋರರು ಮಂಜುನಾಥ್ ಹಾಗೂ ಅವರ ಪತ್ನಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದೋಚಿದ್ದಾರೆ.

ಮನೆಯ ಮತ್ತೊಂದು ಭಾಗದಲ್ಲಿ ಮಲಗಿದ್ದ ಮಂಜುನಾಥ್ ತಂದೆ ಹಾಗೂ ತಾಯಿಯ ಮೇಲೂ ಹಲ್ಲೆ ನಡೆಸಿದ್ದು, ಅವರ ಬಳಿ ಯಾವುದೇ ಆಭರಣವಿಲ್ಲದನ್ನು ಕಂಡು ಬಿಟ್ಟಿದ್ದಾರೆ. ಈ ಸಂದರ್ಭ ಮನೆಯ ರೂಂನಲ್ಲಿ ಮಲಗಿದ್ದ ಮಂಜುನಾಥ್ ಅವರ ಪುತ್ರಿಯ ರೂಂನ ಬಾಗಿಲು ಮುರಿದು ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ತಮ್ಮ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಲು ಮುಂದಾಗಿದ್ದಕ್ಕೆ ಮೊಬೈಲ್ ಕಸಿದುಕೊಂಡು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳು ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಿತ್ತಿದ್ದಾರೆ.


ಚಾಮಲಾಪುರ ಗೇಟ್ ನಲ್ಲಿ ದರೋಡೆ ನಡೆಸುವುದಕ್ಕೂ ಮೊದಲು ತಾಲೂಕಿನ ಕಂಚಿನಕೋಟೆ ಹಾಗೂ ಚೋಳಸಂದ್ರ ಗ್ರಾಮದಲ್ಲಿ ದರೋಡೆಗೆ ಯತ್ನ ನಡೆಸಿದ್ದು ಮನೆಗಳ ಬೀಗ ಹೊಡೆಯಲು ಯತ್ನಿಸುತ್ತಿರುವ ಸಂದರ್ಭ ಸಾರ್ವಜನಿಕರು ಆಗಮಿಸಿದ ಹಿನ್ನೆಲೆ ವಿಫಲ ಯತ್ನವಾಗಿ ಅಲ್ಲಿಂದ ಚಾಮಲಾಪುರ ಗೇಟ್ ಕಡೆಗೆ ಹೋಗಿದ್ದಾರೆ. ಸ್ಥಳಕ್ಕೆ ಬೆಳ್ಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net