

ಶಿರಸಿ: ಕರೊನಾ ಹಿನ್ನೆಲೆಯಲ್ಲಿ ಸಾಮಾನ್ಯ ಮಕ್ಕಳಂತೆ ಆನ್ಲೈನ್ ಪಾಠಗಳಿಗೆ ತೆರೆದುಕೊಳ್ಳಲು ಶಕ್ತಿಯಿಲ್ಲದ ಬುದ್ಧಿಮಾಂದ್ಯ ಮಕ್ಕಳಿಗೆ ಇಲ್ಲಿನ ಅಜಿತ ಮನೋಚೇತನಾ ಸಂಸ್ಥೆಯ ವಿಕಾಸಶಾಲೆಯ ಶಿಕ್ಷಕರು ಅವರ ಮನೆಗೆ ತೆರಳಿ ತರಬೇತಿ ನೀಡುತ್ತಿದ್ದಾರೆ. ಅಲ್ಲದೆ, ವಿವಿಧ ಚಟುವಟಿಕೆಗಳನ್ನೂ ಕಲಿಸುತ್ತಿದ್ದಾರೆ.
ಬುದ್ಧಿಮಾಂದ್ಯ ಮಕ್ಕಳ ಆರೈಕೆ, ತರಬೇತಿಗಾಗಿಯೇ ಹೆಸರಾದ ನಗರದ ಅಜಿತ ಮನೋಚೇತನಾ ಸಂಸ್ಥೆಯ ವಿಕಾಸ ಶಾಲೆಯನ್ನು ಕರೊನಾ ಕಾರಣಕ್ಕೆ ತೆರೆದಿಲ್ಲ. ಹೀಗಾಗಿ, ಇಲ್ಲಿನ 15ಕ್ಕೂ ಹೆಚ್ಚು ಮಕ್ಕಳಿಗೆ ನಿತ್ಯದ ಚಟುವಟಿಕೆಗೆ ತೊಡಕಾಗಿದೆ. ಈ ಮಕ್ಕಳಿಗೆ ಸಾಮಾನ್ಯ ಮಕ್ಕಳಂತೆ ಆನ್ಲೈನ್ ಪಾಠ ಸಾಧ್ಯವಿಲ್ಲ. ಆದ್ದರಿಂದ ಸಂಸ್ಥೆಯ ಪ್ರಮುಖರು ಸೇರಿ ಬುದ್ಧಿಮಾಂದ್ಯ ಮಕ್ಕಳ ಮನೆಗೇ ಹೋಗಿ ತರಬೇತಿ, ಚಟುವಟಿಕೆ ನಡೆಸಲು ಶಿಕ್ಷಕ ವೃಂದಕ್ಕೆ ಸೂಚನೆ ನೀಡಿದ್ದಾರೆ. ಇದರಿಂದ ಒಂದೆಡೆ ಬುದ್ಧಿಮಾಂದ್ಯ ಮಕ್ಕಳಿಗೆ ತರಬೇತಿ ಸಿಕ್ಕರೆ ಇನ್ನೊಂದೆಡೆ ಈ ಮಕ್ಕಳ ಪಾಲಕರಿಗೆ ನೆಮ್ಮದಿಯಾಗಿದೆ.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಇರುವ ಬುದ್ಧಿಮಾಂದ್ಯ ಮಕ್ಕಳ ಮನೆಗಳಿಗೆ ಮುಖ್ಯ ಶಿಕ್ಷಕಿ ನರ್ಮದಾ ಹಾಗೂ ಸಹಶಿಕ್ಷಕಿಯರಾದ ಗೀತಾ, ಶ್ಯಾಮಲಾ, ಸುಮಿತ್ರಾ ಅವರು ತೆರಳಿ ಪಾಠ ಪ್ರಾರಂಭಿಸಿದ್ದಾರೆ. ಯೋಗ, ಭಜನೆ, ಹಾಡು, ಸ್ಪೀಚ್ಥೆರಫಿ, ಫಿಜಿಯೋಥೆರಫಿ ಸೇರಿದಂತೆ ವಿವಿಧ ಕಲಿಕೆ ಆರಂಭಿಸಿದ್ದಾರೆ. ಬುದ್ಧಿಮಾಂದ್ಯ ಮಕ್ಕಳ ಆರೋಗ್ಯ ಪರಿಸ್ಥಿತಿ ಬಗ್ಗೆ ಪಾಲಕರ ಜೊತೆ ಮಾಹಿತಿ ಸಂಗ್ರಹಿಸಿ, ವೈದ್ಯರ ಸಲಹೆ ಪಡೆದು ಉಚಿತವಾಗಿ ಔಷಧ ನೀಡುತ್ತಿದ್ದಾರೆ. ವಿಶೇಷ ಮಕ್ಕಳ ಸಮೀಕ್ಷೆ, ಶಾಲೆಬಿಟ್ಟ ಮಕ್ಕಳ ಬಗ್ಗೆ ಮಾಹಿತಿ, ಅಂಗವಿಕಲರ ಸೌಲಭ್ಯದ ಬಗೆಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕೋವಿಡ್ ಸೂಚನೆ, ನೀತಿ ನಿಯಮಗಳ ಪಾಲನೆ ಮಾಡಿಕೊಂಡು ಈ ಕಾರ್ಯಚಟುವಟಿಕೆ ನಡೆಸಲಾಗುತ್ತಿರುವುದು ವಿಶೇಷವಾಗಿದೆ.
ಶಾಲೆ ಬಾಗಿಲು ಮುಚ್ಚಿದ್ದರೂ ಬುದ್ಧಿಮಾಂದ್ಯ ಮಕ್ಕಳ ಕಲಿಕೆಗೆ ವಿಕೇಂದ್ರೀಕೃತವಾಗಿ ವಾರಕ್ಕೆ 2ರಿಂದ 3 ದಿನ ಮಕ್ಕಳ ಮನೆಗಳಿಗೆ ಹೋಗಿ ಶಾಲಾ ಪರಿಸರ ನಿರ್ವಿುಸಲು ಈ ಕ್ರಮ ಕೈಗೊಳ್ಳಲಾಗಿದೆ. ಅಜಿತ ಮನೋಚೇತನಾದ ಈ ವಿಶೇಷ ಸೇವಾ ಕಾರ್ಯಕ್ಕೆ ಪಾಲಕರು, ಹಿತೈಷಿಗಳು ಶ್ಲಾಘಿಸುತ್ತಿದ್ದಾರೆ.ಸುಧೀರ ಭಟ್ಟ, ಸಂಸ್ಥೆ ಅಧ್ಯಕ್ಷ
ಇದೊಂದು ಅಪರೂಪದ ಅನುಭವವಾಗಿದೆ. ಬುದ್ಧಿಮಾಂದ್ಯ ಮಕ್ಕಳ ಪಾಲಕರು, ಬಡವರು, ಶ್ರಮಿಕ ವರ್ಗಕ್ಕೆ ಸೇರಿದವರಾಗಿದ್ದಾರೆ. ಇವರೆಲ್ಲರೂ ನಮ್ಮ ಕಾರ್ಯಕ್ಕೆ ಬೆಂಬಲ, ಸಹಕಾರ ನೀಡಿದ್ದಾರೆ. ಬುದ್ಧಿಮಾಂದ್ಯ ಮಕ್ಕಳ ಪಾಲಕರ ಜೊತೆ ಸಂವಹನ ನಡೆಸಲು ಇಲ್ಲಿ ಅವಕಾಶ ಸಿಕ್ಕಿದೆ. ಮನೆಯಲ್ಲಿ ಪಾಠ ಮಾಡುತ್ತಿದ್ದರೆ ಶಾಲೆಯಲ್ಲಿ ಕುಳಿತು ಕಲಿತಷ್ಟೇ ಗಂಭೀರವಾಗಿ ಮಕ್ಕಳು ಕಲಿಯುತ್ತಿದ್ದಾರೆ.-ನರ್ಮದಾ ಹೆಗಡೆ- ಮುಖ್ಯಶಿಕ್ಷಕಿ