

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಅರ್ಹ ಫಲಾನುಭವಿಗಳಿಗೆ ಮನೆಗಳು ಲಭಿಸುವಂತೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಹಾಗಾಗಿ ಯಾರಿಗೂ ಹಣ ಕೊಟ್ಟು ಮನೆ ಪಡೆಯಲು ಮುಂದಾಗಬೇಡಿ ಎಂದು ಶಾಸಕ ಅರವಿಂದ ಬೆಲ್ಲದ ವಿನಂತಿಸಿದರು.
ನಗರದ ತಾರಿಹಾಳ ಬ್ರಿಡ್ಜ್ ಸಮೀಪದಲ್ಲಿ 1,248 ಜಿಪ್ಲಸ್ 3 ಮಾದರಿಯ ಗುಂಪು ಮನೆಗಳ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನನ್ನ ಕ್ಷೇತ್ರದಲ್ಲಿನ ಸೂರಿಲ್ಲದವರಿಗೆ ಸೂರು ಕೊಡಲು ಯೋಜನೆ ರೂಪಿಸಿದ್ದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವು ಹರಿದು ಬಂದಿದೆ. ಒಟ್ಟು 7 ಸಾವಿರ ಮನೆಗಳನ್ನು ಅರ್ಹರಿಗೆ ನಿರ್ವಿುಸಿ ಕೊಡಲು ಉದ್ದೇಶಿಸಲಾಗಿದೆ. 8 ಆಶ್ರಯ ಬಡಾವಣೆಗಳಲ್ಲಿದ್ದ ಮನೆಗಳನ್ನು ಅರ್ಹರಿಗೆ ಕೊಟ್ಟಿದೆ. 43 ಕೊಳಚೆ ಪ್ರದೇಶದ ನಿವಾಸಿಗಳಿಗೆ ಅಡಮಾನ ಋಣಮುಕ್ತ ಪ್ರಮಾಣ ಪತ್ರ ನೀಡಲಾಗುವುದು. ರಾಮಲಿಂಗೇಶ್ವರ ನಗರದ ನಿವಾಸಿಗಳಿಗೆ ಶೀಘ್ರವೇ ಈ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿ ಮಾತನಾಡಿ, ಯುಪಿಎ ಸರ್ಕಾರದ ಅವಧಿಯಲ್ಲಿ 20 ಸಾವಿರ ಕೋಟಿ ರೂ. ಮನೆಗಳನ್ನು ನಿರ್ವಿುಸಲು ಅನುದಾನ ನೀಡಿತ್ತು. 13 ಲಕ್ಷ ಮನೆಗಳು ಮಂಜೂರಾಗಿದ್ದವು. ಇದು ಹತ್ತು ವರ್ಷಗಳ ಅವಧಿ. ನಮ್ಮ ಸರ್ಕಾರದಿಂದ 5 ವರ್ಷದ ಅವಧಿಯಲ್ಲಿ 46 ಲಕ್ಷ ಮನೆಗಳಿಗೆ 70 ಸಾವಿರ ಕೋಟಿ ರೂ. ಅನುದಾನ ನೀಡಿದ್ದೇವೆ. ಇಲ್ಲಿಯವರೆಗೆ ಒಟ್ಟು 1 ಕೋಟಿ 22 ಲಕ್ಷ ಮನೆಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಒಟ್ಟಾರೆ 2 ಲಕ್ಷ ಕೋಟಿ ರೂ. ಕೊಟ್ಟಿದ್ದೇವೆ ಎಂದರು.
ಮನೆ ಪಡೆಯಲು ಯಾರಗೂ ಹಣ ಕೊಡಬೇಡಿ. ಏಜೆಂಟರು ಕೈಚಾಚುತ್ತಾರೆ. ಇದಕ್ಕೆ ಆಸ್ಪದ ಕೊಡಬೇಡಿ. ಕಾಂಗ್ರೆಸ್ ಏಜೆಂಟರ ಪಾರ್ಟಿ. ಕೇಂದ್ರ ಸರ್ಕಾರ ಮನೆ ಪಡೆಯಲು ಪಾರದರ್ಶಕ ವ್ಯವಸ್ಥೆ ತಂದಿದೆ. ನೇರವಾಗಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.
ಧಾರವಾಡದಲ್ಲಿ ಕ್ರೀಡಾ ಸಮುಚ್ಛಯ ನಿರ್ಮಾಣ ಆಗುತ್ತಿದೆ. ಹುಬ್ಬಳ್ಳಿಯ ಹೊರವಲಯದಲ್ಲಿ ಕ್ರೀಡಾ ಶಾಲೆ ಹಾಗೂ ವಸತಿ ನಿಲಯ ತರಲಾಗುವುದು. ಖೇಲೋ ಇಂಡಿಯಾದಿಂದ ನಿರ್ವಿುಸಿ, ಕ್ರೀಡಾಪಟುಗಳು ದೇಶದ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಪಸರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಚ್ಛೆ ಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗೋಣ ಎಂದರು. ನಂತರ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು.
ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ, ಸತೀಶ ಹಾನಗಲ್ಲ, ಪ್ರಮುಖರಾದ ಬಸವರಾಜ ಗರಗ, ಅಶೋಕ ವಾಲೀಕಾರ ಇತರರು ಇದ್ದರು.