ಮನೆಗಳ್ಳನ ಬಂಧನ; 116 ಗ್ರಾಂ ಚಿನ್ನಾಭರಣ ವಶ

IMG-20210120-WA0052
Published on

ವಿಜಯಪುರ: ಡೊಮನಾಳ ತಾಂಡಾ ನಂ. 2ರಲ್ಲಿ ಈಚೆಗೆ ನಡೆದಿದ್ದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿರುವ ಪೊಲೀಸರು ಆತನಿಂದ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಸ್ಥಳೀಯ ನಿವಾಸಿ ಕಿರಣ ವಾಚು ರಾಠೋಡ (26) ಬಂಧಿತ ಆರೋಪಿ. ಕಳೆದ ನ. 22 ರಂದು ರಾತ್ರಿ 7 ರಿಂದ ನ. 23ರ ಬೆಳಗ್ಗೆ 9ರ ನಡುವಿನ ಸಮಯದಲ್ಲಿ ಅನೀಲ ರಾಠೋಡ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಯ ಬಾಗಿಲ ಕೀಲಿ ಮುರಿದು ಒಳಗೆ ಹೊಕ್ಕು ಪಡಸಾಲೆಯಲ್ಲಿದ್ದ ಕಬ್ಬಿಣದ ಟ್ರೆಜರಿ ಮುರಿದು ಅದರಲ್ಲಿ ಇಟ್ಟಿದ್ದ ಒಟ್ಟು 6 ಲಕ್ಷ ರೂ.ಮೌಲ್ಯದ 116 ಗ್ರಾಂ ಹಳೆಯ ಬಂಗಾರದ ಸಾಮಾನುಗಳನ್ನು ಕಳ್ಳತನ ಮಾಡಲಾಗಿತ್ತು.

ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್‌ಪಿ ಅನುಪಮ್ ಅಗರವಾಲ್ ಅವರ ಮಾರ್ಗದರ್ಶನದಲ್ಲಿ ಪ್ರಕರಣ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಸದರಿ ತಂಡದ ಚುರುಕಿನ ಕಾರ್ಯಾಚರಣೆ ಫಲವಾಗಿ ಆರೋಪಿ ಬಂಧಿಯಾಗಿದ್ದು ಆತನನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ತಂಡದಲ್ಲಿ ಎಎಸ್‌ಪಿ ಡಾ.ರಾಮ್ ಎಲ್.ಅರಸಿದ್ದಿ, ಡಿವೈಎಸ್‌ಪಿ ಕೆ.ಸಿ. ಲಕ್ಷ್ಮಿನಾರಾಯಣ, ಸಿಪಿಐ ಸಂಗಮೇಶ ಪಾಲಭಾವಿ, ಪಿಎಸ್‌ಐ ಆನಂದ ಠಕ್ಕಣ್ಣವನವರ, ಆರ್.ಎ. ದಿನ್ನಿ ಮತ್ತಿತರರು ಇದ್ದರು. ಸದರಿ ತಂಡಕ್ಕೆ ಪ್ರಶಂಸನಾ ಪತ್ರದೊಂದಿಗೆ ಬಹುಮಾನ ಘೋಷಿಸಿದ್ದಾಗಿ ಎಸ್‌ಪಿ ಅನುಪಮ್ ಅಗರವಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net