ಮನೆಗಳಿಗೆ ನುಗ್ಗುತ್ತಿದೆ ಕೊಳಚೆ ನೀರು!, ಬಾಗೇಪಲ್ಲಿ 7ನೇ ವಾರ್ಡ್ ನಿವಾಸಿಗಳಿಗೆ ನಿತ್ಯ ನರಕದರ್ಶನ

28 bgp 7 th ward news photo 1
Published on

ಬಾಗೇಪಲ್ಲಿ : ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿಗಳಲ್ಲಿ ಕೊಳಚೆ ನೀರು ಹರಿಯದೆ ನಿಂತಿದ್ದು, ಪಟ್ಟಣದ 7ನೇ ವಾರ್ಡ್ ನಿವಾಸಿಗಳು ನಿತ್ಯವೂ ನರಕ ಅನುಭವಿಸುತ್ತಿದ್ದಾರೆ. ಕೊಳಚೆಯಿಂದ ಉತ್ಪತ್ತಿಯಾಗುತ್ತಿರುವ ಸೊಳ್ಳೆ, ಬ್ಯಾಕ್ಟೀರಿಯಾಗಳಿಂದ ಡೆಂಘೆ, ಚಿಕೂನ್ ಗುನ್ಯಾ ವ್ಯಾಪಿಸುತ್ತಿದ್ದರೂ ಸ್ಥಳೀಯ ಆಡಳಿತಕ್ಕೆ ಮಾತ್ರ ಇತ್ತ ನೋಡಲು ಪುರುಸೊತ್ತಿಲ್ಲ!

ಪಟ್ಟಣ ವ್ಯಾಪ್ತಿಯ 7ನೇ ವಾರ್ಡ್‌ನ ಕೊತ್ತಪಲ್ಲಿ ರಸ್ತೆ ಸಮೀಪದ ಗಲ್ಲಿಗಳಲ್ಲಿ ಪುರಸಭೆ ಹಲವು ವರ್ಷಗಳ ಹಿಂದೆ ಚರಂಡಿ ಮತ್ತು ಸಿಸಿ ರಸ್ತೆ ಕಾಮಗಾರಿ ನಡೆಸುತ್ತಿದೆ. ಆದರೆ ವರ್ಷಗಳು ಕಳೆದಿವೆಯೇ ಹೊರತು ಕೆಲಸ ಮಾತ್ರ ಪೂರ್ಣಗೊಂಡಿಲ್ಲ. ಅವೈಜ್ಞಾನಿಕ ಚರಂಡಿ ನಿರ್ಮಾಣ ಹಾಗೂ ಕೆಲಸ ಅರ್ಧಕ್ಕೆ ನಿಂತಿರುವುದರಿಂದ ಕೊಳಚೆ ನೀರು ಮನೆಗಳ ಮುಂಭಾಗದಲ್ಲೇ ನಿಲ್ಲುತ್ತಿದ್ದು, ನಿವಾಸಿಗಳ ನೆಮ್ಮದಿಗೆ ಕುತ್ತು ತಂದಿದೆ.

ಗಲಿಜು ತುಳಿದುಕೊಂಡೇ ಮನೆ ಒಳಗೆ ಹೋಗಬೇಕು, ಬಾಗಿಲು ತೆಗೆಯೋಕೂ ಅಸಹ್ಯಪಡುವಂತಾಗಿದೆ. ದುರ್ನಾತಕ್ಕೆ ಹೊಟ್ಟೆ ತೊಳಿಸಿದಂತಾಗುತ್ತೆ. ಸೊಳ್ಳೆ, ನೊಣಗಳ ಕಾಟಕ್ಕೆ ಸಾಕು ಸಾಕಾಗಿದೆ. ಬಹುತೇಕ ಮಕ್ಕಳು ವಾಂತಿ, ಭೇದಿ, ಜ್ವರದಿಂದ ಬಳಲುತ್ತಿದ್ದಾರೆ ಎನ್ನುತ್ತಿರುವ ಇಲ್ಲಿನ ನಿವಾಸಿಗಳಿಗೆ ಅನೈರ್ಮಲ್ಯದಿಂದ ನರಕ ದರ್ಶನವಾಗುತ್ತಿದೆ!

ಅವೈಜ್ಞಾನಿಕ ಸಿಸಿ ರಸ್ತೆ, ಚರಂಡಿ ನಿರ್ಮಾಣದಿಂದಾಗಿ ಕೊಳಚೆ ಸರಾಗವಾಗಿ ಹರಿಯದೆ ಕೊಚ್ಚೆ ಗುಂಡಿ ಸೃಷ್ಟಿಯಾಗಿ ಬೀದಿ ನಾಯಿ, ಹಂದಿಗಳು ಬಿದ್ದು ಹೊರಳಾಡುತ್ತಿವೆ. ಜತೆಗೆ ಕಾಮಗಾರಿ ಅರ್ಧಕ್ಕೆ ನಿಂತಿದ್ದರೂ ಪುರಸಭೆ, ಜನಪ್ರತಿನಿಧಿಗಳು ಇತ್ತ ತಿರುಗಿಯೂ ನೋಡಿಲ್ಲ. ಪ್ರಶ್ನಿಸಿದರೆ ಇಲ್ಲದ ನೆಪ ಹೇಳಿ ಜಾರಿಕೊಳ್ಳುತ್ತಿದ್ದು, ಅನೈರ್ಮಲ್ಯದಿಂದಾಗಿ ನೆಮ್ಮದಿ ಕಳೆದುಕೊಂಡಿರುವ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ಮುಖ ಮಾಡದ ಸ್ವಚ್ಛತಾ ಪಡೆ : ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ, ಚರಂಡಿಗಳಲ್ಲಿ ತ್ಯಾಜ್ಯ ತುಂಬಿದ್ದು, ಪುರಸಭೆ ಪೌರ ಕಾರ್ಮಿಕರು ವಾರ್ಡ್ ಕಡೆ ಮುಖ ಮಾಡಿಲ್ಲ. ಈ ಪ್ರದೇಶದಲ್ಲಿ 50 ಕ್ಕೂ ಹೆಚ್ಚು ಮನೆಗಳಿದ್ದು, ಸರಿಯಾದ ರಸ್ತೆ, ಚರಂಡಿಗಳು ಇಲ್ಲದೆ ಸಣ್ಣ ಮಳೆ ಬಂದರೂ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತದೆ, ಮನೆ ಎದುರು ಶೇಖರಣೆಗೊಳ್ಳುತ್ತಿದ್ದು ಒಡಾಡಲು ಹರಸಾಹಸ ಪಡುವಂತಾಗಿದೆ ಎಂಬುದು ನಿವಾಸಿಗಳ ಅಳಲು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net