ಮನೆಗಳಿಗೆ ನುಗ್ಗಿದ ಚರಂಡಿ ನೀರು

JCB
Published on

ಚಿತ್ರದುರ್ಗ: ನಗರದಲ್ಲಿ ಎರಡು ದಿನ ಸುರಿದ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶದ ಅನೇಕ ಮನೆಗಳಿಗೆ ನೀರು ನುಗ್ಗಿದ್ದು, ನಾಗರಿಕರ ನಿದ್ದೆಗೆಡಿಸಿದೆ.

ನಗರದ ಒಳಚರಂಡಿ ನೀರು ಹೊರವಲಯದ ಮಲ್ಲಾಪುರ ಕೆರೆ ಸೇರುತ್ತಿದ್ದು, ಮಳೆಯಾದಾಗಲೆಲ್ಲಾ ನೀರಿನ ಹರಿವು ಹೆಚ್ಚಳವಾಗಿ ಅದರೊಂದಿಗೆ ಕಲುಷಿತಗೊಂಡ ನೀರು ಮನೆಗಳಿಗೆ ನುಗ್ಗುತ್ತಿರುವುದು ನಾಗರಿಕರನ್ನು ಪೇಚಾಟಕ್ಕೆ ಸಿಲುಕಿಸಿದೆ.

ದುರ್ವಾಸನೆಯ ನೀರಿನಿಂದ ತಿಂಡಿ-ಊಟ ಮಾಡಲು ಸಾಧ್ಯವಾಗದಂತ ದುಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಇಡೀ ನೀರು ಹೊರಹಾಕಲು ನಾಗರಿಕರು ಮುಂದಾಗಿದ್ದು, ಹೈರಾಣಾಗಿದ್ದಾರೆ.

ಇನ್ನೂ ಪಿಳ್ಳೇಕೆರನಹಳ್ಳಿ ಸಮೀಪದ ತೋಟಗಳಿಗೂ ನೀರು ನುಗ್ಗುತ್ತಿದ್ದು, ತೋಟಗಾರಿಕೆ ಬೆಳೆಗಳಿಗೆ ತೊಂದರೆ ಉಂಟಾಗುತ್ತಿದೆ. ಕೆಳಸೇತುವೆಗಳ ಬಳಿ ಸಾರಾಗವಾಗಿ ಹರಿಯುವಂತೆ ಮಾಡದೆಯೇ ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾಮಗಾರಿಯೇ ಕಾರಣ ಎಂದು ರೈತರು ದೂರಿದ್ದಾರೆ.

ಕೆರೆಯಲ್ಲಿನ ಗಿಡಗಳ ತೆರವು: ಮಲ್ಲಾಪುರ ಕೆರೆ ಸಮೀಪದ ನಿವಾಸಿಗಳಿಗೆ ತೊಂದರೆ ಆಗಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಜೆಸಿಬಿ ಯಂತ್ರಗಳ ಮೂಲಕ ಕೆರೆ ದಡದಲ್ಲಿನ ಗಿಡಗಳ ತೆರವಿಗೆ ಸೂಚಿಸಿದ್ದು, ಅದರಂತೆ ಶನಿವಾರ ಒಂದಿಷ್ಟು ಕಾರ್ಯಾಚರಣೆ ನಡೆಯಿತು. ಭಾನುವಾರವೂ ಮುಂದುವರೆಯಲಿದ್ದು, ಶಾಶ್ವತ ಪರಿಹಾರ ಕಲ್ಪಿಸಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಚಿತ್ರದುರ್ಗದಲ್ಲಿ 57.6 ಮಿ.ಮೀ ಮಳೆ: ಮಳೆಯ ವಿವರದನ್ವಯ ಚಿತ್ರದುರ್ಗ ತಾಲೂಕಿನ ಚಿತ್ರದುರ್ಗ ವಿಭಾಗ 1ರಲ್ಲಿ 57.6 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಅತ್ಯಧಿಕ ಮಳೆಯಾದ ಪ್ರದೇಶವಾಗಿದೆ.

ಚಿತ್ರದುರ್ಗ ವಿಭಾಗ 2 ರಲ್ಲಿ 44.6 ಮಿ.ಮೀ, ತುರುವನೂರು, ರಾಮಗಿರಿ ತಲಾ 5.4, ಐನಹಳ್ಳಿ 6.4, ರಾಂಪುರ 24.1, ಎಚ್.ಡಿ.ಪುರ 20.8, ತಾಳ್ಯ 24.4, ಹೊಸದುರ್ಗ 10.4, ಬಾಗೂರು 18.2, ಶ್ರೀರಾಂಪುರ 12, ನಾಯಕನಹಟ್ಟಿ 14.2 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ, ಹಿರಿಯೂರು ತಾಲೂಕಿನಲ್ಲಿ ತಲಾ 3, ಹೊಸದುರ್ಗ 1 ಸೇರಿ ಜಿಲ್ಲಾದ್ಯಂತ 7 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net