

ಗುಂಡ್ಲುಪೇಟೆ: ತಮ್ಮ ಗ್ರಾಮಕ್ಕೆ ಕಲುಷಿತ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ ಎಂದು ತಾಲೂಕಿನ ಬೆರಟಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಲಚವಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಸೇರಿದ ಗ್ರಾಮದಲ್ಲಿ ಮನೆಗಳಿಗೆ ಕಳೆದ ಒಂದು ವಾರದಿಂದ ಕಲುಷಿತ ನೀರು ಸರಬರಾಜು ಆಗುತ್ತಿದೆ. ಮನೆ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಜಲಜೀವನ್ ಮಿಷನ್ ಯೋಜನೆಯ ಪೈಪ್‌ಲೈನ್ ಒಡೆದು ತಗ್ಗು ಪ್ರದೇಶದಲ್ಲಿ ಮಡುಗಟ್ಟಿ ನಿಂತಿರುವ ಕೊಳಚೆ ನೀರು ಕುಡಿಯುವ ನೀರಿನ ಜತೆಗೆ ಬೆರೆತು ಮನೆಗಳಿಗೆ ಸರಬರಾಜಾಗುತ್ತಿದೆ. ಈ ಬಗ್ಗೆ ಕಳೆದ 3 ದಿನಗಳ ಹಿಂದೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.
ಕಲುಷಿತ ಕುಡಿಯುವ ನೀರನ್ನು ಸೇವಿಸಿದ ನಾನಾ ಬೀದಿಗಳ ನಿವಾಸಿಗಳು ಹಾಗೂ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈಗಾಗಲೇ ಹಲವರು ಕೆಮ್ಮು, ಜ್ವರ, ಗಂಟಲು ಕೆರೆತ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದು, ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಮಳೆಗಾಲ ಆರಂಭವಾಗುತ್ತಿದೆ. ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಭೀತಿಯುಂಟಾಗಿದೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳಾದ ಗುರುದೇವಪ್ರಸಾದ್ ಹಾಗೂ ಇತರರು ಒತ್ತಾಯಿಸಿದ್ದಾರೆ.
ಈ ಪೈಪ್ ಲೈನ್ ಸರಿಪಡಿಸುವಂತೆ ಜಲಜೀವನ್ ಮಿಷನ್ ಯೋಜನೆಯವರಿಗೆ ತಿಳಿಸಲಾಗಿದ್ದು, ಸದ್ಯದಲ್ಲಿಯೇ ರಿಪೇರಿ ಮಾಡಿಸಲಾಗುವುದು.
* ಕವನ, ಪಿಡಿಒ, ಬಲಚವಾಡಿ.