

ಮೈಸೂರು: ವಿವಿಧೆಡೆ ಕಳ್ಳತನ ಮಾಡಿದ ಖತರ್ನಾಕ್ ಖದೀಮನನ್ನು ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ನಿವಾಸಿ ಪ್ರಸಾದ್ ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಮಹಮದ್ ಮುನ್ನಾ ತಲೆಮರೆಸಿಕೊಂಡಿದ್ದಾನೆ. ಈತನಿಂದ 36.12 ಲಕ್ಷ ರೂ. ಮೌಲ್ಯದ 516 ಗ್ರಾಂ ಚಿನ್ನಾಭರಣ, 10 ಸಾವಿರ ರೂ. ಮೌಲ್ಯದ ಬೆಳ್ಳಿ ಪದಾರ್ಥ ಸೇರಿದಂತೆ 36.22 ಲಕ್ಷ ರೂ. ಮೊತ್ತದ ಪದಾರ್ಥಗಳು, ಕೃತ್ಯಕ್ಕೆ ಬಳಸಿದ ಬೈಕ್ ಸಹ ಜಪ್ತಿ ಮಾಡಲಾಗಿದೆ.
ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿಯ ಮನೆಯೊಂದರಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದರು. ಶ್ರೀರಾಂಪುರ ಚೆಕ್‌ಪೋಸ್ಟ್ ಬಳಿ ಕುವೆಂಪುನಗರ ಪೊಲೀಸರು ತಪಾಸಣೆ ನಡೆಸುತ್ತಿದ್ದರು.
ಇಲ್ಲಿಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಆರೋಪಿ ಪ್ರಸಾದ್ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಈತನನ್ನು ವಶಕ್ಕೆ ಪಡೆದು ಸ್ಕೂಟರ್‌ನಲ್ಲಿ ಪರಿಶೀಲನೆ ಮಾಡಿದಾಗ ಕದ್ದಿರುವ ವಸ್ತುಗಳು ಪತ್ತೆಯಾಗಿದೆ.
ಬಂಧಿತನ ವಿರುದ್ಧ ವಿವಿಧೆಡೆ ನಡೆದ 33 ಮನೆಗಳವು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಮತ್ತಷ್ಟು ಕಳುವಾದ ಪದಾರ್ಥಗಳು ಪರಾರಿಯಾದ ಮತ್ತೊಬ್ಬ ಆರೋಪಿ ಬಳಿ ಇದೆ. ಆತನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ಎಲ್.ಅರುಣ್, ಪಿಎಸ್‌ಐಗಳಾದ ಗೋಪಾಲ್, ಮದನ್, ಸಿಬ್ಬಂದಿ ಆನಂದ್, ಮಹೇಶ್ವರ್, ಕೆ.ಟಿ.ಮಂಜುನಾಥ್, ಎಂ.ಪಿ.ಮಂಜುನಾಥ್, ಯಶವಂತ್, ಮಂಜು, ಹಜರತ್, ಸುರೇಶ್, ರವಿ, ನಾಗೇಶ್ ಹಾಗೂ ಕುಮಾರ್ ಕಾರ್ಯಾಚರಣೆಯಲ್ಲಿದ್ದರು.