

ಹುಬ್ಬಳ್ಳಿ: ಜಗತ್ತಿನಲ್ಲಿ ಸಂಸ್ಕೃತ ಭಾಷೆಯಷ್ಟು ಸಮೃದ್ಧ ಭಾಷೆ ಮತ್ತೊಂದಿಲ್ಲ. ಹಾಗಾಗಿ, ಮನೆ ಮನೆಗಳಲ್ಲಿ ಸಂಸ್ಕೃತ ಮಾತನಾಡುವಂತಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಅಭಿಪ್ರಾಯಪಟ್ಟರು.
ಇಲ್ಲಿನ ಗೋಕುಲ ರಸ್ತೆಯ ಬೆಲ್ಲದ ಶೋರೂಂನಲ್ಲಿ ‘ಸಂಸ್ಕೃತ ಭಾರತೀ’ ಸಂಸ್ಥೆಯ ಉತ್ತರ ಕರ್ನಾಟಕ ಕಾರ್ಯಾಲಯ ‘ವಚನಮ್ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನ ಶೇ. 80ರಷ್ಟು ಭಾಷೆಗಳಿಗೆ ಸಂಸ್ಕೃತ ಭಾಷೆ ಹೋಲಿಕೆ ಇದೆ. ಸ್ವಲ್ಪ ಪ್ರಯತ್ನಿಸಿದರೂ ಸಂಸ್ಕೃತವನ್ನು ಸುಲಭವಾಗಿ ಕಲಿಯಬಹುದಾಗಿದೆ ಎಂದರು. ಇಂಗ್ಲಿಷ್ ಶ್ರೇಷ್ಠ, ಸಂಸ್ಕೃತ ಕನಿಷ್ಠ ಎಂಬ ಭಾವನೆ ಹಲವರಲ್ಲಿದೆ. ಹಾಗಾಗಿ, ಮಕ್ಕಳಲ್ಲಿ ಇಂಗ್ಲಿಷ್ ಬಿತ್ತುತ್ತಿದ್ದಾರೆ. ಇಂಗ್ಲಿಷ್ನಲ್ಲಿ ಒಂದು ಶಬ್ದಕ್ಕೆ ಮತ್ತೊಂದು ಪರ್ಯಾಯ ಶಬ್ದ ಇರುವುದಿಲ್ಲ. ಆದರೆ, ಸಂಸ್ಕೃತದಲ್ಲಿ 1 ಶಬ್ದಕ್ಕೆ ಹತ್ತಾರು ಪರ್ಯಾಯ ಶಬ್ದಗಳಿವೆ. ಸಂಸ್ಕೃತ ಮಾತನಾಡುವುದರಿಂದ ಮಕ್ಕಳ ಭಾಷೆ ಶುದ್ಧವಾಗುತ್ತದೆ. ನಂತರ ಸರಳವಾಗಿ ಹಲವು ಭಾಷೆಗಳನ್ನು ಕಲಿಯಲು ಸಾಧ್ಯವಾಗುತ್ತದೆ ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಸಂಸ್ಕೃತ ನಮ್ಮ ದೇಶದ ಸಂಸ್ಕೃತಿಯ ಮೂಲವಾಗಿದೆ. ಸಂಸ್ಕೃತದ ಮೂಲಕ ದೇಶದ ಸಂಸ್ಕೃತಿ ಜಗತ್ತಿನಲ್ಲಿ ಅನಾವರಣಗೊಂಡಿದೆ. ರಷ್ಯನ್ ಭಾಷೆ ಸಂಸ್ಕೃತಕ್ಕೆ ಹೋಲಿಕೆ ಇದೆ. ರಷ್ಯನ್ ಭಾಷೆಯಲ್ಲಿ ಶೇ. 25ರಷ್ಟು ಶಬ್ದಗಳು ಸಂಸ್ಕೃತ ಶಬ್ದಗಳಿವೆ. ಸಂಸ್ಕೃತ ದೇಶದ ಸ್ವಾಭಿಮಾನದ ಸಂಕೇತವಾಗಿದೆ. ಆಡು ಭಾಷೆಯಂತೆ ಸಂಸ್ಕೃತ ಎಲ್ಲೆಡೆ ಪಸರಿಸಲಿ ಎಂದು ತಿಳಿಸಿದರು.
ಆರ್ಎಸ್ಎಸ್ ಹಿರಿಯ ಪ್ರಚಾರಕ ಸು. ರಾಮಣ್ಣ, ವಿಭಾಗ ಪ್ರಚಾರಕ ವಿಜಯ ಮಹಾಂತೇಶ, ವಿಆರ್ಎಲ್ ಲಾಜಿಸ್ಟಿಕ್ ಕಾನೂನು ಸಲಹೆಗಾರ ಆರ್.ಬಿ ಗದಗಕರ, ಹಿಂದು ಜಾಗರಣ ವೇದಿಕೆ ಪ್ರಾಂತ ಸಂಘಟನಾ ಕಾರ್ಯದರ್ಶಿ ಸು. ಕೃಷ್ಣಮೂರ್ತಿ, ಸುರೇಶ, ವಿನಯ ನಾಯಕ, ಮತ್ತಿತರರು ಪಾಲ್ಗೊಂಡಿದ್ದರು.
ಶ್ರೀ ವಿದ್ಯಾ ಪ್ರಾರ್ಥಿಸಿದರು. ಸಂಸ್ಕೃತ ಭಾರತೀ ಉತ್ತರ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಸ್ವಾಗತಿಸಿದರು. ವಿಭಾಗ ಸಂಚಾಲಕ ಸತೀಶ ಮುರೂರ ನಿರೂಪಿಸಿದರು.
ಉಚಿತ ಸಂಸ್ಕೃತ ತರಗತಿ: ಸಂಸ್ಕೃತ ಭಾರತೀ ವತಿಯಿಂದ 10 ದಿನಗಳ ‘ಸಂಭಾಷಣಾ’ ಉಚಿತ ತರಗತಿ ನೀಡಲಾಗುವುದು. ನಿತ್ಯ ಎರಡು ಗಂಟೆಗಳ ಕಾಲ ತರಗತಿಗೆ ಹಾಜರಾದರೆ ಸಾಕು ಸಾಮಾನ್ಯ ಸಂಸ್ಕೃತ ಕಲಿಯಬಹುದಾಗಿದೆ. ಅಂಚೆ ಮೂಲಕ ಸಂಸ್ಕೃತ ಕಲಿಕೆ ಸೌಲಭ್ಯವೂ ಇಲ್ಲಿದೆ. ಪ್ರವೇಶ, ಪರಿಚಯ, ಶಿಕ್ಷಾ ಮತ್ತು ಕೋವಿದ ಎಂಬ ನಾಲ್ಕು ಕೋರ್ಸ್ಗಳನ್ನು ಕಲಿಯಬಹುದಾಗಿದೆ. ಆಸಕ್ತರು ಮೊ.ಸಂ. 80502 50829 ಅಥವಾ 98448 56376 ಗೆ ಸಂರ್ಪಸಬಹುದು.