ಮನೆಗಳ ಮಂಜೂರಾತಿ ಪತ್ರ ದೃಢೀಕರಿಸಿ ಕೊಡಿ

Published on

ಕೊಳ್ಳೇಗಾಲ: ಪಟ್ಟಣದ ದೊಡ್ಡನಾಯಕರ ಬೀದಿಯ ಹೊಸ ಬಡಾವಣೆಯಲ್ಲಿ 1976-77ರಲ್ಲಿ ಅರ್ಹ ಫಲಾನುಭವಿಗಳಿಗೆ ಹಂಚಿಕೆಯಾಗಿರುವ ಮನೆಗಳಿಗೆ ಮಂಜೂರಾತಿ ಪತ್ರ ಹಾಗೂ ನಕಾಶೆಯನ್ನು ದೃಢೀಕರಿಸಿ ನೀಡುವಂತೆ ಜ.18ರಂದು ತಹಸೀಲ್ದಾರ್ ಬಸವರಾಜು, ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ನಗರಸಭೆ ಪೌರಾಯುಕ್ತ ಎ.ರಮೇಶ್ ಪತ್ರ ಬರೆದಿದ್ದಾರೆ.

ನಗರಸಭೆಯ 10ನೇ ವಾರ್ಡ್‌ಗೆ ಸೇರಿದ ಹೊಸ ಬಡಾವಣೆಯಲ್ಲಿರುವ 15ನೇ ಸೈಟ್ ರಾಜ್ಯ ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ದಿ.ಶಿವರಾಮ್ ಅವರಿಗೆ ಸೇರಿದ್ದು, ಇಲ್ಲಿ ಶೆಡ್ ನಿರ್ಮಿಸಲಾಗಿತ್ತು. ಆದರೆ ಇತ್ತೀಚೆಗೆ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿಸಲು ಸ್ಥಳೀಯ ನಗರಸಭಾ ಸದಸ್ಯ ಜಿ.ಪಿ.ಶಿವಕುಮಾರ್ ಮುಂದಾದ ವೇಳೆ ದಿ.ಶಿವರಾಮ್ ಅವರ ಶೆಡ್ ಜಖಂಗೊಂಡಿದೆ ಎಂದು ರೈತ ಸಂಘದ ಮುಖಂಡರು ಆರೋಪಿಸಿ ನಗರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಶೆಡ್ ಜಖಂಗೊಳಿಸಿದ ನಗರಸಭಾ ಸದಸ್ಯ ಜಿ.ಪಿ.ಶಿವಕುಮಾರ್ ರುದ್ಧ ಕಾನೂನು ಕ್ರಮ ಕೈಗೊಂಡು ಶೆಡ್ ಮರು ನಿರ್ಮಿಸಿಕೊಡುವಂತೆ ಆಗ್ರಹಿಸಿದ್ದರು.

ಇದರಿಂದ ಎಚ್ಚೆತ್ತ ನಗರಸಭಾ ಪೌರಾಯುಕ್ತ ಎ.ರಮೇಶ್, ಜ.18 ರಂದು ನಗರಸಭಾಧ್ಯಕ್ಷೆ ಸಿ.ಎನ್.ರೇಖಾ ರಮೇಶ್ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಬಡಾವಣೆಗೆ ಸಂಬಂಧಿಸಿದಂತೆ ಲಭ್ಯವಾದ 2 ಪ್ರತ್ಯೇಕ ನಕ್ಷೆಯನ್ನು ವೀಕ್ಷಿಸಿದ ಅವರು, ಇವುಗಳಲ್ಲಿ ಯಾವುದು ಅಧಿಕೃತ ಎಂಬುದನ್ನು ಖಚಿತಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ಪತ್ರ ಬರೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭಾ ಕಚೇರಿಯ ಅಧೀನ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದ ವೇಳೆ ತಾಲೂಕು ಆಡಳಿತದಿಂದ 1976-77ನೇ ಸಾಲಿನಲ್ಲಿ ಒಟ್ಟು 10.01 ಎಕರೆ ಭೂಮಿಯಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ಹಂಚಿಕೆ ಮಾಡಲಾಗಿದೆ. ಹೀಗಾಗಿ ಈ ನಿವೇಶನ ಯಾವುದು? ಇಲ್ಲಿ ರಸ್ತೆ ಯಾವುದು? ಎಂಬುದು ಸೇರಿದಂತೆ ಹಲವು ಗೊಂದಲಗಳು ಕಂಡು ಬಂದಿವೆ. ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುವ ಸಮಯದಲ್ಲಿ ಅನುಮೋದಿತ ನಕ್ಷೆ ಮತ್ತು ಕೆಲವು ಫಲಾನುಭವಿಗಳಿಗೆ ಬದಲಿ ನಿವೇಶನಗಳಿಗೆ ಹಕ್ಕುಪತ್ರ ನೀಡಿರುವ ಪ್ರತಿಯನ್ನೂನೀಡುವಂತೆ ಪತ್ರದಲ್ಲಿ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net