

ಧಾರವಾಡ: ಕಳೆದ ಆಗಸ್ಟ್, ಸೆಪ್ಟೆಂಬರ್ನಲ್ಲಿ ಭಾರಿ ಮಳೆಯಿಂದ ಹಾನಿಗೀಡಾದ ಮನೆ ಸಮೀಕ್ಷೆ, ಯಾದಿ ಸಿದ್ಧತೆ ಪ್ರಕ್ರಿಯೆ ರಾಜಕಾರಣಿಗಳು ಮತ್ತು ಅಧಿಕಾರಿಗಳ ಸ್ವಾರ್ಥದಿಂದಾಗಿ ಅಲ್ಲಲ್ಲಿ ಹಾದಿ ತಪ್ಪಿದ್ದು ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವ ಸಾಧ್ಯತೆ ಕಂಡುಬಂದಿದೆ. ಇದೇ ವೇಳೆ, ಅಧಿಕಾರಿಗಳ ಕೈ ಬಿಸಿ ಮಾಡುವ ಶಕ್ತಿ/ರಾಜಕೀಯ ಪ್ರಭಾವ ಇಲ್ಲದ ಕೆಲ ಅರ್ಹರಿಗೆ ಅನ್ಯಾಯವಾಗಿರುವ ಆರೋಪ ಕೇಳಿಬಂದಿದೆ.
ಶೇ. 75ಕ್ಕಿಂತ ಹೆಚ್ಚು ಹಾನಿಗೀಡಾದ ಮನೆಗಳನ್ನು ಎ ಕೆಟಗರಿ, ಶೇ. 25ರಿಂದ 75ರಷ್ಟು ಹಾನಿಗೀಡಾದವು ಬಿ ಹಾಗೂ ಶೇ. 15ರಿಂದ 25ರಷ್ಟು ಹಾನಿಗೀಡಾದ ಮನೆಗಳನ್ನು ಸಿ ಕೆಟಗರಿಗೆ ಸೇರಿಸಲಾಗುತ್ತದೆ. ಎ ಕೆಟಗರಿಗೆ 5 ಲಕ್ಷ ರೂ., ಬಿ ಗೆ 3 ಲಕ್ಷ ರೂ. ಹಾಗೂ ಸಿ ವರ್ಗಕ್ಕೆ 50,000 ರೂ. ಪರಿಹಾರ ನೀಡಲಾಗುತ್ತದೆ.
ಸಿ ಕೆಟಗರಿಗೆ ಸೇರಬಹುದಾದ ಒಂದಿಷ್ಟು ಮನೆಗಳನ್ನು ಕೆಲ ಅಧಿಕಾರಿಗಳು ಲಂಚ ಪಡೆದು ಬಿ ಗೆ ಸೇರಿಸಿದ್ದಾರೆ. ರಾಜಕೀಯ ನಾಯಕರು ಪ್ರಭಾವ ಬಳಸಿ ತಮ್ಮ ಕೆಲ ಬೆಂಬಲಿಗರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮನೆಗಳ ಹಂಚಿಕೆ ಪಟ್ಟಿ ಸಿದ್ಧಪಡಿಸಿ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಮಾಹಿತಿ ಸಲ್ಲಿಕೆಗೆ ನ. 30 ಕೊನೆಯ ದಿನವಾಗಿತ್ತು. ಕೊನೆಯ ಕ್ಷಣದಲ್ಲಿ ಎ ಕೆಟಗರಿಯಲ್ಲಿದ್ದ ಕೆಲವರು ಬಿ ಗೆ ತಳ್ಳಲ್ಪಟ್ಟರೆ, ಸಿ ವರ್ಗದಲ್ಲಿದ್ದ ಕೆಲವರಿಗೆ ಬಡ್ತಿ ನೀಡಲಾಗಿದೆ.
ಕೊನೇ ದಿನ ರಾತ್ರಿ ಶಾಸಕ ಅಮೃತ ದೇಸಾಯಿ ಅವರು ಅಧಿಕಾರಿಗಳನ್ನು ರ್ಸಟ್ ಹೌಸ್ಗೆ ಕರೆಸಿ ತರಾಟೆಗೆ ತೆಗೆದುಕೊಂಡಿರುವುದು, ಮೂವರ ವಿರುದ್ಧ ಡಿ.ಸಿ.ಯವರಿಗೆ ಪತ್ರ ಬರೆದಿರುವುದು ಅಧಿಕಾರಿಗಳಿಂದ ಲೋಪವಾಗಿದೆ ಎಂಬ ಅನುಮಾನ ಮೂಡಿಸಿದೆ.
ನಿಜವಾದ ಅರ್ಹರಾದ ತಮಗೆ ಅನ್ಯಾಯವಾಗಿದೆ ಎಂದು ಕೆಲವರು ನೇರವಾಗಿ ಜಿಲ್ಲಾಧಿಕಾರಿ, ತಹಸೀಲ್ದಾರ್ಗೆ ಅಹವಾಲು ಸಲ್ಲಿಸಿದ್ದಾರೆ. ಅಂತಿಮವಾಗಿ ಧಾರವಾಡ ತಾಲೂಕಿನಲ್ಲಿ ಎ ಕೆಟಗರಿಯಲ್ಲಿ 11, ಬಿ ಯಲ್ಲಿ 416, ಸಿ ಯಲ್ಲಿ 610 ಮನೆಗಳನ್ನು ಸೇರಿಸಲಾಗಿದೆ.
ತಾ.ಪಂ. ಸದಸ್ಯನೂ....
ಬಿ ಕೆಟಗರಿಯಲ್ಲಿ ಯಾದವಾಡ ತಾ.ಪಂ. ಕ್ಷೇತ್ರದ ಬಿಜೆಪಿ ಸದಸ್ಯನ ಹೆಸರು ಸೇರ್ಪಡೆಯಾಗಿದೆ. ಅವರು ಅನೇಕ ವರ್ಷದಿಂದ ಬೇರೆಡೆ ನೆಲೆಸಿದ್ದು, ರಾಜಕೀಯ ಪ್ರಭಾವ ಕೆಲಸ ಮಾಡಿರುವ ಶಂಕೆಯಿದೆ. ಅದೇ ಊರಿನ ಗ್ರಾ.ಪಂ. ಸದಸ್ಯೆಯೊಬ್ಬರ ಮನೆ ಬಿದ್ದರೂ ಆಕೆಗೆ ಪರಿಹಾರವೇ ಸಿಕ್ಕಿಲ್ಲವಂತೆ.
ತಪ್ಪು ಮಾಡಿದ್ದರೆ ಸೂಕ್ತ ಕ್ರಮ
ಮನೆಗಳ ಸರ್ವೆ ವರದಿ ಸರಿ ಇದೆಯೇ ಎಂಬುದನ್ನು ತಿಳಿಯಲು ಅನ್ಯ ತಾಲೂಕಿನ ಇಂಜಿನಿಯರ್ ಹಾಗೂ ಅಧಿಕಾರಿಗಳಿಂದ ಪರಿಶೀಲಿಸಲಾಗುತ್ತದೆ. ತಪ್ಪು ಮಾಡಿದ್ದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು. ಹಾನಿಗಳ ವರ್ಗೀಕರಣ ಕುರಿತು ಎ.ಸಿ. ನೇತೃತ್ವದಲ್ಲಿ ಪರಿಶೀಲನೆಗೆ ಸೂಚಿಸಲಾಗಿದೆ. ತಾರತಮ್ಯ ಆಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಡಿ.ಸಿ. ನಿತೇಶ ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಸಮೀಕ್ಷೆ ನಡೆಸಿದ ಪ್ರಕಾರ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ಪಟ್ಟಿಗೆ ಜಿಲ್ಲಾಧಿಕಾರಿ ಅನುಮೋದನೆ ನೀಡಿದ ನಂತರ ಜಿಪಿಎಸ್, ಆಡಿಟ್ ಒಪ್ಪಿಗೆಯಾದ ಬಳಿಕ ಮತ್ತೊಮ್ಮೆ ಪರಿಶೀಲಿಸಿ ಪರಿಹಾರ ನೀಡಲಾಗುವುದು. ಯಾವುದೇ ದೂರುಗಳು ಬಂದರೂ ಮತ್ತೊಮ್ಮೆ ಪರಿಶೀಲಿಸಲಾಗುವುದು.- ಡಾ. ಸಂತೋಷಕುಮಾರ ಬಿರಾದಾರ, ಧಾರವಾಡ ತಹಸೀಲ್ದಾರ್
EndFragment