ಮನೆ ಮುಂದೆಯೇ ಸಮಾಧಿಗೆ ಮುಂದಾದ ದಲಿತ ಕುಟುಂಬ!

22ark1
Published on

ಅರಕಲಗೂಡು: ಪಟ್ಟಣ ಹೊರವಲಯದ ಶಂಭುನಾಥಪುರ ಗ್ರಾಮದಲ್ಲಿ ನಿಧನರಾದ ದಲಿತ ಕುಟುಂಬದ ವ್ಯಕ್ತಿಯ ಮೃತದೇಹವನ್ನು ಹೂಳಲು ಜಾಗವಿಲ್ಲದೆ ಮನೆಯ ಬಾಗಿಲು ಮುಂದೆಯೇ ಸಮಾಧಿಗೆ ಗುಂಡಿ ತೋಡಲು ಮುಂದಾಗಿದ್ದರು. ಕೊನೆಗೆ ತಹಸೀಲ್ದಾರ್ ಮಧ್ಯಸ್ಥಿಕೆಯಿಂದಾಗಿ ಖಾಸಗಿ ಜಮೀನಿನಲ್ಲಿ ಶವಸಂಸ್ಕಾರ ಮಾಡಲಾಯಿತು.


ಗ್ರಾಮದ ದಲಿತರಾದ ಗಿಡ್ಡಯ್ಯ (62) ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಿಧನರಾದರು. ಗಿಡ್ಡಯ್ಯ ಅವರ ಪತ್ನಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಪುತ್ರ ದೇವರಾಜು ಕೂಲಿ ಕೆಲಸ ಮಾಡಿಕೊಂಡಿದ್ದು, ಈ ಕುಟುಂಬಕ್ಕೆ ಜೀವನಾಧಾರಕ್ಕಾಗಿ ಜಮೀನು ಇಲ್ಲ. ವಾಸಿಸಲು ಯೋಗ್ಯವಾದ ಸೂರು ಕೂಡ ಇಲ್ಲ. ದುಸ್ಥಿತಿಯಲ್ಲಿರುವ ಹಳೆಯ ಮನೆಯಲ್ಲಿಯೇ ಈ ಬಡ ಕುಟುಂಬ ಬದುಕಿನ ಬಂಡಿ ಸಾಗಿಸುತ್ತಿದೆ. ಗ್ರಾಮದಲ್ಲಿ ದಲಿತರು ಮೃತಪಟ್ಟರೆ ಶವಸಂಸ್ಕಾರ ನಡೆಸಲು ಸ್ಮಶಾನವಿಲ್ಲ. ಹೀಗಾಗಿ ಶನಿವಾರ ಮನೆಯ ಬಾಗಿಲ ಮುಂದೆಯೇ ಗುಂಡಿ ತೋಡಿ ಗಿಡ್ಡಯ್ಯ ಅವರ ಶವಸಂಸ್ಕಾರ ನಡೆಸಲು ಮುಂದಾದರು.


ಸಮಸ್ಯೆ ಆಲಿಸಿದ ಅಧಿಕಾರಿಗಳು: ವಿಷಯ ತಿಳಿದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿಕುಮಾರ್, ರಾಜಸ್ವನಿರೀಕ್ಷಕ ಭಾನುಪ್ರಕಾಶ್ ಗ್ರಾಮಕ್ಕೆ ತೆರಳಿ ಸಮಸ್ಯೆ ಆಲಿಸಿದರು. ಗ್ರಾಮದ ಹೊರಭಾಗದಲ್ಲಿರುವ ಸ್ಮಶಾನಕ್ಕೆ ತೆರಳಲು ದಾರಿ ಇಲ್ಲ. ಇಲ್ಲಿ ಕೆಲ ದಲಿತ ಕುಟುಂಬಗಳು ವಾಸವಿದ್ದು, ನಮಗೆ ಸ್ಮಶಾನ ಜಾಗ ಒದಗಿಸಿಲ್ಲ. ಈ ದಲಿತ ಕುಟುಂಬದ ವ್ಯಕ್ತಿಗೆ ವಾಸಿಸಲು ಮನೆಯೂ ಇಲ್ಲ, ಶವ ಹೂಳಲು ಸ್ವಂತ ಜಮೀನಿಲ್ಲ. ಇಂಥ ಸಂಕಷ್ಟದಲ್ಲಿ ಏನು ಮಾಡಬೇಕೆಂಬುದು ದಿಕ್ಕು ತೋಚದೆ ಸಂಬಂಧಿಕರು ಮನೆಯ ಬಾಗಿಲ ಮುಂದೆಯೇ ಶವ ಹೂಳಬೇಕಾಗಿದೆ ಎಂದು ಅಲವತ್ತುಕೊಂಡರು.


ಅರಕಲಗೂಡು ಸ್ಮಶಾನ ಜಾಗದಲ್ಲಿ ಸದ್ಯಕ್ಕೆ ಶವಸಂಸ್ಕಾರ ಮಾಡಿ. ತಹಸೀಲ್ದಾರ್ ಗಮನಕ್ಕೆ ತಂದು ಸ್ಮಶಾನ ಜಾಗ ನೀಡುವುದಾಗಿ ಅಧಿಕಾರಿಗಳು ಮನವೊಲಿಸಲು ಮುಂದಾದರು. ಇದಕ್ಕೆ ಒಪ್ಪದ ಗ್ರಾಮಸ್ಥರು ಈಗಲೇ ಜಾಗ ಮಂಜೂರು ಮಾಡಿಕೊಡಿ ಇಲ್ಲವೇ ಮನೆ ಮುಂದೆಯೇ ಶವಸಂಸ್ಕಾರ ಮಾಡುತ್ತೇವೆ ಎಂದು ಪಟ್ಟುಹಿಡಿದರು.


ಮಧ್ಯಾಹ್ನದ ನಂತರ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಆಗಮಿಸಿ ಗ್ರಾಮಸ್ಥರ ಮನವೊಲಿಸಿದರು. ಬಳಿಕ ಖಾಸಗಿ ಜಮೀನಿನಲ್ಲಿ ಶವಸಂಸ್ಕಾರ ನಡೆಸಲಾಯಿತು. ಗ್ರಾಮಕ್ಕೆ ಈಗಾಗಲೇ 14 ಗುಂಟೆ ಸ್ಮಶಾನ ಜಾಗ ಮಂಜೂರು ಮಾಡಿ ವಡ್ಡರಹಳ್ಳಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ. ಮತ್ತೊಂದು ಸ್ಮಶಾನ ಜಾಗ ನೀಡುವ ಸಂಬಂಧ ಮುಂದಿನ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net