

ಮೈಸೂರು: ನಗರದ ಪುರಭವನ ಆವರಣದಲ್ಲಿ ನಿರ್ಮಿಸಿರುವ ‘ಸಂವಿಧಾನ ಪೀಠಿಕೆ’ಯ ಶಿಲಾಫಲಕವನ್ನು ಶನಿವಾರ ಉದ್ಘಾಟಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ, ನಾವೆಲ್ಲರೂ ಒಂದೇ ಎಂದು ಜಾಗೃತಿ ಮೂಡಿಸುವ ನಮ್ಮ ಭಾರತದ ಸಂವಿಧಾನ ಪೀಠಿಕೆ ಪ್ರತಿ ಮನೆ ಮನೆಗೆ ತಲುಪಬೇಕು ಎಂದರು.
ನಾವು ಭಾರತೀಯರು, ಭಾರತದ ಮೂಲ ನಿವಾಸಿಗಳು ಎಂಬುದನ್ನು ಅರಿವು ಮೂಡಿಸಲು ಸಂವಿಧಾನ ಪೀಠಿಕೆ ಅಗತ್ಯ. ಆದ್ದರಿಂದ ನಾನು ಸಚಿವನಾದ ಬಳಿಕ ಎಲ್ಲ ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದಿಸಲು ಶುರು ಮಾಡಲಾಯಿತು. ಅದೇ ರೀತಿ ಇಂದು ಮೈಸೂರು ನಗರದ ಪ್ರಮುಖ ಸ್ಥಳದಲ್ಲಿ ಪಾಲಿಕೆ ವತಿಯಿಂದ ಬೃಹತ್ ಸಂವಿಧಾನ ಪೀಠಿಕೆ ಶಿಲಾಫಲಕ ನಿರ್ಮಿಸಲಾಗಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ದೇಶದಲ್ಲಿ ಸಂವಿಧಾನ ಮರೆಮಾಚುವ ಕೆಲಸ ನಡೆಯುತ್ತಿದೆ. ಆದರೆ, ಅದು ಸಾಧ್ಯವಿಲ್ಲ. ಹೀಗಾಗಿ ದಲಿತರು, ಅಸ್ಪಶ್ಯರು ಒಗ್ಗಟ್ಟಾಗಬೇಕು. ಶಿಕ್ಷಣ ಸಂಘಟನೆ ಹೋರಾಟದ ಮೂಲಕ ಅಂಬೇಡ್ಕರ್ ವಾದ ಗಟ್ಟಿಗೊಳಿಸಬೇಕು. ಮನೆ ಮನೆಗೂ ಸಂವಿಧಾನ ಪೀಠಿಕೆ ತಲುಪಿದಾಗ ಮಾತ್ರ ಭಾರತೀಯರಾಗಿ ನಾವೆಲ್ಲ ಒಂದೇ ಎಂದು ಅರಿತು ಬಾಳಬಹುದು ಎಂದು ಹೇಳಿದರು.
ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಸಾಂಸ್ಕೃತಿಕ ನಗರದಲ್ಲಿ ಸಂವಿಧಾನ ಪೀಠಿಕೆ ಅಳವಡಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಏಕೆಂದರೆ ಸರ್ವಧರ್ಮ ಸಮಭಾವ ಈ ಸಂವಿಧಾನ ಪೀಠಿಕೆಯಲ್ಲಿದೆ. ಸಂವಿಧಾನದ ಪೀಠಿಕೆ ಈ ದೇಶದ ರಕ್ಷಾ ಕವಚ. ಇದಕ್ಕಾಗಿ ಎಲ್ಲ ಶಾಲಾ, ಕಾಲೇಜುಗಳು ಹಾಸ್ಟೆಲ್‌ಗಳಲ್ಲಿ ಸಂವಿಧಾನ ಪೀಠಿಕೆ ಹಾಕಲಾಗಿದೆ ಎಂದು ಹೇಳಿದರು.
ಭಾರತೀಯರೆಲ್ಲ ಬಂಧುಗಳು ಎಂಬ ಸಂದೇಶ ಸಾರುವ ಸಮಾನತೆಯ ಸಂಕೇತ ಕೊಟ್ಟವರು ಅಂಬೇಡ್ಕರ್ ಅವರು. ಇಂತಹ ಮಹಾನ್ ನಾಯಕ ಕೊಟ್ಟ ಈ ಪೀಠಿಕೆಯನ್ನು ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಹಾಕಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಶಿವಕುಮಾರ್, ಸಿ.ಎನ್.ಮಂಜೇಗೌಡ, ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ರಂಗೇಗೌಡ, ಮಾಜಿ ಮೇಯರ್ ಪುರುಷೋತ್ತಮ ಇದ್ದರು.
ಮುಂದಿನ ಸಿಎಂ ಡಾ.ಎಚ್.ಸಿ.ಮಹದೇವಪ್ಪ ಕೂಗು ಕಾರ್ಯಕ್ರಮದಲ್ಲಿ ಮೊಳಗಿತು. ಎಚ್‌ಸಿಎಂ ಬೆಂಬಲಿಗರು ಈ ಕುರಿತು ಘೋಷಣೆ ಕೂಗಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಾ.ಮಹದೇವಪ್ಪ ಅವರು, ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಹೇಳಿದಾಗಲೂ ಬೆಂಬಲಿಗರಿಂದ ಕೂಗು ಮುಂದುವರಿಯಿತು. ಮುಗುಳ್ನಗೆಯೊಂದಿಗೆ ಇದೆಲ್ಲ ಅಭಿಮಾನಿಗಳ ಆಸೆ.
ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಹೈಕಮಾಂಡ್ ನನಗೆ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಿದ್ದೇನೆ. ಮುಂದೆ ಏನು ಆಗುತ್ತೋ ಗೊತ್ತಿಲ್ಲ. ಜವಾಬ್ದಾರಿ ಕೊಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.