‘ಮನೆ ಮನೆಗೆ ರಂಗಾಯಣ’ಕ್ಕೆ ಚಾಲನೆ

6
Published on

ಮೈಸೂರು: ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಪ್ರಚಾರಕ್ಕಾಗಿ ‘ಮನೆ ಮನೆಗೆ ರಂಗಾಯಣ, ಮನ ಮನಕ್ಕೆ ಬಹುರೂಪಿ’ ಕಾರ್ಯಕ್ರಮ ಸೋಮವಾರ ನಗರದಲ್ಲಿ ನಡೆಯಿತು.
ಗಾರುಡಿ ಗೊಂಬೆಗಳೊಂದಿಗೆ ಮೇಯರ್ ಶಿವಕುಮಾರ್ ಅವರ ಮನೆಗೆ ತೆರಳಿ ಬಹುರೂಪಿ ನಾಟಕೋತ್ಸವಕ್ಕೆ ಆಹ್ವಾನಿಸಲಾಯಿತು.

‘ರಂಗಾಯಣವು ಡಿ.8 ರಿಂದ 15ರ ವರೆಗೆ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಆಯೋಜಿಸಿದ್ದು, ವಿವಿಧ ಭಾಷೆಗಳ ನಾಟಕ ಪ್ರದರ್ಶನ ನಡೆಯಲಿದೆ. ಡಿ.10ರಂದು ಸಂಜೆ 5.30ಕ್ಕೆ ನಾಟಕೋತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಭಾರತೀಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಅಧ್ಯಕ್ಷ ಪರೇಶ್ ರಾವಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದರು.

ಈ ಬಾರಿ ‘ಭಾರತೀಯತೆ’ ಎಂಬ ಪರಿಕಲ್ಪನೆಯಲ್ಲಿ ನಾಟಕೋತ್ಸವ ನಡೆಯಲಿದೆ. 7 ರಾಜ್ಯಗಳ 7 ವಿವಿಧ ಭಾಷೆಗಳ ನಾಟಕ, 12 ಕನ್ನಡ ನಾಟಕ ಹಾಗೂ ಒಂದು ತುಳು ನಾಟಕ ಸೇರಿದಂತೆ 20 ನಾಟಕಗಳು ಭೂಮಿಗೀತ, ಕಿರುರಂಗಮಂದಿರ ಹಾಗೂ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ. 8ರಿಂದ ವನರಂಗದಲ್ಲಿ ಜಾನಪದೋತ್ಸವ, 9ರಿಂದ ರಾಷ್ಟ್ರೀಯ ಚಲನಚಿತ್ರೋತ್ಸವ, 10ರಿಂದ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದ್ದು, ಕರಕುಶಲ ವಸ್ತುಪ್ರದರ್ಶನವೂ ಇರಲಿದೆ ಎಂದು ಮಾಹಿತಿ ನೀಡಿದರು.

ಸಾಹಿತಿ ಪ್ರಧಾನ್ ಗುರುದತ್ತ, ಭರತನಾಟ್ಯ ಕಲಾವಿದೆ ವಸುಂಧರಾ ದೊರೆಸ್ವಾಮಿ ಅವರ ಮನೆಗಳಿಗೆ ತೆರಳಿ ಆಹ್ವಾನ ನೀಡಲಾಯಿತು. ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ, ಕಲಾವಿದರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net