

ಹಾಸನ : ಜೆಡಿಎಸ್ ಮತ್ತು ಬಿಜೆಪಿ ಅಬ್ಬರದ ಪ್ರಚಾರ ನಡುವೆ ಕಾಂಗ್ರೆಸ್ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಅವರು ನಗರದ ಹಲವು ಬಡಾವಣೆಗಳಿಗೆ ಭೇಟಿ ನೀಡಿ ಪ್ರಮುಖ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು.
ಬುಧವಾರ ನಗರದ 17ನೇ ವಾರ್ಡಿನ ಹಿರಿಯ ಮುಖಂಡ ಟೊಮೆಟೋ ಸಾದಿಕ್ ಅವರನ್ನು ಭೇಟಿಯಾಗಿ ತಮಗೆ ಸಹಕರಿಸುವಂತೆ ಮನವಿ ಮಾಡಿದರು. ಅಲ್ಲದೆ ಹಲವು ಮುಖಂಡರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಬಳಿಕ 19ನೇ ವಾರ್ಡಿನ ನಗರಸಭೆ ಮಾಜಿ ಸದಸ್ಯರಾದ ರಮೇಶ್ ಬಾಬು ಅವರನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ನಾನು ಸಾಮಾನ್ಯ ಬಡಕುಟುಂಬದಿಂದ ಮೇಲೆ ಬಂದವನು. ಕಷ್ಟ-ದುಃಖಗಳನ್ನು ಅನುಭವಿಸಿಕೊಂಡು ಬೆಳೆದವನು. ಹೀಗಾಗಿ ನಾನು ಜನರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ. ನೀವು ನನಗೆ ಈ ಬಾರಿ ಮತ ನೀಡಿ ಆಶೀರ್ವಾದ ಮಾಡಿದರೆ ನಾನು ಖಂಡಿತವಾಗಿಯೂ ನಿಮ್ಮ ಕಷ್ಟಗಳ ಜತೆಯಾಗಿ ನಿಲ್ಲುತ್ತೇನೆ. ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಮತದಾರರಲ್ಲಿ ಬನವಾಸೆ ರಂಗಸ್ವಾಮಿ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಯ್ಯೂಮ್, ನಗರಸಭೆ ಸದಸ್ಯ ಅಶು ಆಸೀಫ್, ಕೆಪಿಸಿಸಿ ಸದಸ್ಯ ಆರೀಫ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಇನ್ನಿತರರು ಇದ್ದರು.