ಮನೆ ಮನೆಗೆ ಪೊಲೀಸರ ಸೇವೆ

13RAjesh1
Published on

ಚಾಮರಾಜನಗರ: ಪೊಲೀಸರಿಗೆ ಸಾರ್ವಜನಿಕರು ದೂರು ನೀಡಿದ ಮೇಲೆ ಕ್ರಮ ಕೈಗೊಳ್ಳುವುದು ಒಂದು ವಿಧಾನದರೆ, ಪೊಲೀಸರೇ ಸಮಸ್ಯೆ ಗುರುತಿಸಿ ಕ್ರಮ ವಹಿಸುವುದು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ತಿಳಿಸಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಚಾಮರಾಜನಗರ ಉಪ ವಿಭಾಗ ಮಟ್ಟದ ಮನೆ-ಮನೆಗೆ ಪೊಲೀಸ್ ಕಾರ್ಯಕ್ರಮ ಅನುಷ್ಠಾನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಜನಕೇಂದ್ರಿತವಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಕಾನ್ಫರೆನ್ಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆ. ಅದರಂತೆ ಜಿಲ್ಲೆಯಲ್ಲೂ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪೊಲೀಸರು ಸರ್ಕಾರದ ಮುಖವಾಣಿಗಳಿದ್ದಂತೆ. ಪೊಲೀಸರ ಕೆಲಸದ ಆಧಾರದ ಮೇಲೆ ಸರ್ಕಾರದ ಬಗ್ಗೆ ಅಭಿಪ್ರಾಯ ವ್ಯಕ್ತವಾಗುತ್ತದೆ. ಹೀಗಾಗಿ ಪೊಲೀಸರು ಹೆಚ್ಚು ಜಾಗರೂಕರಾಗಿರಬೇಕು. ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಸಾರ್ವಜನಿಕರೊಂದಿಗೆ ಉತ್ತಮ ಒಡನಾಟವನ್ನು ಹೊಂದಿರಬೇಕು. ಗುಪ್ತಚರ ಮಾಹಿತಿ ಪಡೆದು ಕಾನೂನು ಸುವ್ಯವಸ್ಥೆ ಕಾಪಾಡಲು ಮೊದಲೇ ಸಿದ್ಧರಿರಬೇಕೆಂಬುದನ್ನು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ತಿಳಿಸಿಕೊಡುತ್ತದೆ. ಇದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಕೊಳ್ಳೇಗಾಲ ವಿಭಾಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಸಂವಿಧಾನದ ಪೀಠಿಕೆ ವಾಚನ ಮಾಡಿದರು. ಗುಂಡ್ಲಪೇಟೆ, ಚಾಮರಾಜನಗರ ತಾಲೂಕುಗಳ ವಿವಿಧ ಠಾಣೆಗಳ ಪೊಲೀಸರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಸೈಬರ್ ಕ್ರೈಂ ಅರಿವು ಮೂಡಿಸಿ:

ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಕಾರ್ಯಾಗಾರದಲ್ಲಿ ಸೈಬರ್ ಕ್ರೈಂ ಕುರಿತು ಸೆನ್ ಡಿಎಸ್ಪಿ ಪವನ್‌ಕುಮಾರ್ ಪರಿಣಾಕಾರಿಯಾಗಿ ವಿಷಯ ಮಂಡಿಸಿದರು. ಸೈಬರ್ ಅಪರಾಧಗಳ ಕುರಿತು ಪೊಲೀಸರಲ್ಲಿ ಅರಿವು ಮೂಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕರೆ ನೀಡಿದರು.

ಸ್ಮಾರ್ಟ್ ಪೋನ್‌ಗಳು ಹೆಚ್ಚಾದಂತೆ ಜನರನ್ನು ದಡ್ಡರನ್ನಾಗಿ ಮಾಡಲಾಗುತ್ತಿದೆ. ಹಲವು ವಿಧಾನದಲ್ಲಿ ಜನರನ್ನು ಮೋಸ ಮಾಡಲಾಗುತ್ತಿದೆ. ಇದರಲ್ಲಿ ಪೊಲೀಸರೂ ಹೊರತಾಗಿಲ್ಲ. ಸೈಬರ್ ಕ್ರೈಂ ಕುರಿತು ನೀವು ತಿಳಿದುಕೊಂಡು ಸಾರ್ವಜನಿಕರಿಗೂ ತಿಳಿಸಿ ಎಂದು ಹೇಳಿದರು.

ಪಾರ್ಟ್ ಟೈಂ ಕೆಲಸ, ಮನೆಯಲ್ಲೇ ಕುಳಿತು ಕೆಲಸ ಮಾಡಬಹುದೆಂಬ ಜಾಹೀರಾತು ಹಾಕುವ ಜಾಲ ಸೈಬರ್ ಕ್ರೈಂ ಚಟುವಟಿಕೆಯ ಭಾಗವಾಗಿದೆ. ಮೊದಲು ಸ್ವಲ್ಪ ಹಣ ಕೊಟ್ಟು ವಿಶ್ವಾಸ ಗಳಿಸಿಕೊಂಡು ಅಂತಿಮವಾಗಿ ಅಕೌಂಟ್‌ನಲ್ಲಿ ಹಣವಿದ್ದರೂ ತೆಗೆದುಕೊಳ್ಳಲಾಗದಂತೆ ಮಾಡಿ ಮೋಸ ಮಾಡಲಾಗುತ್ತಿದೆ ಎಂದು ಉದಾಹರಣೆ ಸಹಿತ ವಿವರಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಾಲ ಸಿಗುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಆ್ಯಪ್‌ಗಳು ಲೋನ್ ಕೊಡುವುದಾಗಿ ಆಸೆ ತೋರಿಸುತ್ತಾರೆ. ಬಡ್ಡಿ ಜಾಸ್ತಿ ಹಾಕಿ ಸಾಲ ತೀರದಂತೆ ಮಾಡುವುದು, ೆನ್ ಹ್ಯಾಕ್ ಮಾಡುತ್ತಾರೆ. ನಮ್ಮ ಪೋಟೋಗಳ ಮುಖವನ್ನು ನಗ್ನ ರೂಪದ ದೇಹಗಳಿಗೆ ಹಾಕುತ್ತಾರೆ. ಸಾಧ್ಯವಾದಷ್ಟು ೇಸ್‌ಬುಕ್, ಇನ್‌ಸ್ಟಾಗ್ರಾಂಗಳನ್ನು ಬಳಕೆಯೇ ಮಾಡಬೇಡಿ. ಟೆಲಿಗ್ರಾಂ ಆ್ಯಪ್‌ನಲ್ಲಿ ಎಪಿಕ್ ೈಲ್ ಕಳುಹಿಸಿ ಮೊಬೈಲ್ ಹ್ಯಾಕ್ ಮಾಡುತ್ತಾರೆ. 1930 ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸರ ಸೋಗಿನಲ್ಲಿ ವಿಡಿಯೋ ಕಾಲ್ ಮಾಡುತ್ತಾರೆ. ಮೀಶೋ ಹೆಸರಿನಲ್ಲಿ ಲಿಂಕ್ ಕಳುಹಿಸಿ ಹಣ ಪಡೆದು ಮೋಸ ಮಾಡುತ್ತಾರೆ. ಲಾಟರಿಯಲ್ಲಿ ಹಣ ಗಳಿಕೆ, ಪಿಎಂ ಕಿಸಾನ್ ಯೋಜನೆ, ಮುದ್ರಾ ಯೋಜನೆ ಕುರಿತು ಎಪಿಕ್ ೈಲ್ ಕಳುಹಿಸಿ ಮುಗ್ಧ ರೈತರನ್ನು ಮೋಸ ಮಾಡಲಾಗುತ್ತದೆ. ಇದರ ಬಗ್ಗೆ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.

ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಮ್ಮ ಧ್ಯೇಯ:

ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಬೀಟ್ ವ್ಯವಸ್ಥೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಡಿವೈಎಸ್ಪಿ ಲಕ್ಷ್ಮಣಯ್ಯ ಹೇಳಿದರು.

ಪೊಲೀಸ್ ಇಲಾಖೆಯಲ್ಲಿ ಬೀಟ್ ವ್ಯವಸ್ಥೆಗೆ ಮಹತ್ವವಿದೆ. ಸಮಾಜದೊಂದಿಗೆ ಪೊಲೀಸ್ ಹೊಂದಾಣಿಕೆ, ಸ್ನೇಹದಿಂದ ಇದ್ದರೆ ಕಾನೂನು ಸುವ್ಯವಸ್ಥೆ ಕಾಪಾಡಬಹುದು. ಸುಧಾರಿತ ಬೀಟ್ ವ್ಯವಸ್ಥೆ ಜಾರಿಗೆ ಬಂದಿದೆ. ಬೀಟ್ ಸಿಬ್ಬಂದಿಗೆ ಉದ್ದೇಶ ಮತ್ತು ಜವಾಬ್ದಾರಿ ಹಂಚಿಕೆ ಮಾಡುವುದು, ಸುಧಾರಿತ ಜನಸ್ನೇಹಿ ಪೊಲೀಸ್, ಎಲ್ಲರ ಸಮಾನ ಭಾಗವಹಿಸುವಿಕೆ, ತಳ ಹಂತದ ಸಿಬ್ಬಂದಿಯ ಸಬಲೀಕರಣ, ಅರ್ಥ ಪೂರ್ಣ ಪಾತ್ರ, ಸಿಬ್ಬಂದಿಯ ತಾರತಮ್ಯ ನಿವಾರಣೆ, ಗಸ್ತು ಪರಿಣಾಮಕಾರಿ ಜಾರಿಯಾಗಬೇಕು ಎಂದರು.

ಗೈರಾದ ಸಿಬ್ಬಂದಿ, ಎಸ್ಪಿ ತರಾಟೆ:

ಕಾರ್ಯಾಗಾರಕ್ಕೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಗೈರಾಗಿರುವುದಕ್ಕೆ ಎಸ್ಪಿ ಡಾ.ಬಿ.ಟಿ.ಕವಿತಾ ಅಸಮಾಧಾನ ವ್ಯಕ್ತಪಡಿಸಿದರು. ಬೇಗೂರು, ಗುಂಡ್ಲುಪೇಟೆ, ತೆಕರಣಾಂಬಿ, ಚಾಮರಾಜನಗರ ಮತ್ತು ಇತರ ಠಾಣೆಗಳ ಪೊಲೀಸರು ಮತ್ತು ಸಿಬ್ಬಂದಿಯನ್ನು ಎದ್ದೇಳಿಸಿ ಲೆಕ್ಕ ಹಾಕಿ ಗೈರಾದವರ ಕುರಿತು ಕಾರಣ ಕೇಳಿ ಗರಂ ಆದರು. ನಮಗೆಲ್ಲ ಭಾನುವಾರ ರಜೆ ಇಲ್ಲವಾ? ನಿಮಗೆ ಇಷ್ಟ ಬಂದ ಹಾಗೆ ಮಾಡಬಹುದು ಎಂದು ಕೊಂಡಿದ್ದೀರಾ?. ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ತರಬೇತಿಗೆ ಗೈರಾದರೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net