ಮನೆ ಮನೆಗೆ ಎಟಿಎಂ ಹಣ

ATM
Published on

ಕಲಬುರಗಿ: ಲಾಕ್ಡೌನ್ ಸಂದರ್ಭದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮನೆ ಮನೆಗೆ ತೆರಳಿ ಗ್ರಾಹಕರಿಗೆ ಹಣ ತಲುಪಿಸಲು ಮುಂದಾಗಿದೆ. ಮೊಬೈಲ್(ಸಂಚಾರಿ) ಎಟಿಎಂ ಮೂಲಕ ನಿತ್ಯ ನಗರದ ವಿವಿಧ ಬಡಾವಣೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳುತ್ತಿದ್ದು, ಗ್ರಾಹಕರು ಹಣ ಡ್ರಾ ಮಾಡಿಕೊಳ್ಳಬಹುದು ಎಂದು ಬ್ಯಾಂಕಿನ ಪ್ರಾದೇಶಿಕ ಕಚೇರಿ ಸಹಾಯಕ ಮಹಾಪ್ರಬಂಧಕ ಬಿ.ಜಿ.ಸಿದ್ದೇಶಪ್ಪ ತಿಳಿಸಿದ್ದಾರೆ.
ಪ್ರಮುಖವಾಗಿ ಮಹಿಳೆಯರ ಜನಧನ ಖಾತೆ ಮತ್ತು ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಹಣ ಪಡೆಯಬಹುದು. ಜತೆಗೆ ಇತರೆ ಯಾವುದೇ ಬ್ಯಾಂಕಿನ ಗ್ರಾಹಕರೂ ನಿತ್ಯ 25 ಸಾವಿರದವರೆಗೆ ಹಣವನ್ನು ಎಟಿಎಂ ಕಾರ್ಡ್​ ಬಳಸಿ ಡ್ರಾ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಧ್ವನಿವರ್ಧಕ ಮೂಲಕ ಪ್ರಚಾರ ಮಾಡುತ್ತ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಮೊಬೈಲ್ ಎಟಿಎಂ ವಾಹನ ಸಂಚರಿಸಲಿದೆ. ತಮ್ಮ ಪ್ರದೇಶಗಳಿಗೆ ವಾಹನ ಬಂದಾಗ ಗ್ರಾಹಕರು ಸದುಪಯೋಗ ಪಡೆದುಕೊಳ್ಳಬಹುದು. ಎಟಿಎಂನಿಂದ ಹಣ ಪಡೆಯುವ ವೇಳೆ ಗ್ರಾಹಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net