

ಸಂತೋಷ ವೈದ್ಯ, ಹುಬ್ಬಳ್ಳಿ
ಅವಳಿ ನಗರದ ಕಸ ಸಂಗ್ರಹ ವ್ಯವಸ್ಥೆ ಡಿಜಿಟಲ್ ರೂಪ ಪಡೆಯಲಿದೆ. ಸ್ಮಾರ್ಟ್ ಸಿಟಿ ಅನುದಾನದಡಿ ಪ್ರತಿ ಮನೆಗೆ ಆರ್ಎಫ್ಐಡಿ (ರೆಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ ಡಿವೈಸ್) ಟ್ಯಾಗ್ ಅಳವಡಿಸುವ ಕಾರ್ಯ ಚುರುಕು ಪಡೆದಿದೆ.
ವರ್ಷದ ಹಿಂದೆ ಪ್ರಾಯೋಗಿಕವಾಗಿ 4 ವಾರ್ಡ್ಗಳ ಸುಮಾರು 10 ಸಾವಿರ ಮನೆಗಳಿಗೆ ಆರ್ಎಫ್ಐಡಿ ಟ್ಯಾಗ್ ಅಳವಡಿಸಲಾಗಿತ್ತು. ಅದರ ಕಾರ್ಯನಿರ್ವಹಣೆಯನ್ನು ಪರಿಗಣಿಸಿ ಇದೀಗ ಅವಳಿ ನಗರದ ಎಲ್ಲ ವಾರ್ಡ್ಗಳಿಗೆ ವಿಸ್ತರಿಸಲು ನಿರ್ಧರಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ.
ಆ. 28ರ ವರೆಗೆ 51649 ಮನೆಗಳಿಗೆ ಆರ್ಎಫ್ಐಡಿ ಟ್ಯಾಗ್ ಹಾಕಲಾಗಿದೆ. ವಾರ್ಡ್ ಸಂಖ್ಯೆ 14, 23, 24, 25, 30, 35, 36, 37, 38, 39, 40, 41, 42, 50, 51 ಹಾಗೂ 52ರಲ್ಲಿ ಪೂರ್ಣಗೊಳಿಸಲಾಗಿದೆ. ವಾರ್ಡ್ ಸಂಖ್ಯೆ 26, 45, 49, 57, 58, 59 ಹಾಗೂ 62 ರಲ್ಲಿ ಟ್ಯಾಗ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಹುಬ್ಬಳ್ಳಿ-ಧಾರವಾಡ ದಲ್ಲಿ 67 ವಾರ್ಡ್ಗಳಿದ್ದು, ವಸತಿ, ವಾಣಿಜ್ಯ, ಉದ್ಯಮ, ಎಲ್ಲ ಮಾದರಿಯ ಕಟ್ಟಡಗಳು ಸೇರಿ 2.78 ಲಕ್ಷ ಆಸ್ತಿಗಳಿವೆ ಎಂದು ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ತಿಳಿಸಿದೆ.
ಕಾರ್ಯನಿರ್ವಹಣೆ: ಪ್ರತಿ ಪಿಐಡಿ (ಆಸ್ತಿ ಗುರುತಿನ ಸಂಖ್ಯೆ) ಸಂಖ್ಯೆಗೆ ಒಂದರಂತೆ ಪ್ರತಿ ಮನೆಯ ಗೋಡೆ ಅಥವಾ ಕಂಪೌಂಡ್ಗೆ ಟ್ಯಾಗ್ ಅಳವಡಿಸಲಾಗುತ್ತಿದೆ. ಟ್ಯಾಗ್ ಅಳವಡಿಕೆ ಹಾಗೂ ರೀಡಿಂಗ್ ದಾಖಲಿಸಿಕೊಳ್ಳುವ ಕೆಲಸವನ್ನು ಪೌರ ಕಾರ್ವಿುಕರು ನಿರ್ವಹಿಸುತ್ತಿದ್ದಾರೆ. ಕಸ ಸಂಗ್ರಹಕ್ಕೆ ಮನೆ ಮನೆಗೆ ಬರುವ ಪೌರ ಕಾರ್ವಿುಕರಲ್ಲಿ ಒಬ್ಬರು ರೀಡರ್ ಅನ್ನು ಆರ್ಐಫ್ಐಡಿ ಟ್ಯಾಗ್ ಸನಿಹಕ್ಕೆ ಹಿಡಿದು ದಾಖಲಿಸಿಕೊಳ್ಳುತ್ತಾರೆ. ಇದರಿಂದ ಆಯಾ ಮನೆಯಿಂದ ಕಸ ಸಂಗ್ರಹಿಸಿರುವುದು ಖಾತರಿಯಾಗುತ್ತದೆ. ಕ್ಷಣಾರ್ಧದಲ್ಲಿ ಡಿಜಿಟಲ್ ರಿಪೋರ್ಟ್ ರೆಡಿಯಾಗುತ್ತದೆ. ಪ್ರತಿ ಮನೆಯಿಂದ ಕಸ ಸಂಗ್ರಹಿಸುವುದು ಕಡ್ಡಾಯವಾಗುತ್ತದೆ. ಸಿಬ್ಬಂದಿ ತಪ್ಪಿಸಿಕೊಳ್ಳುವ ಹಾಗಿಲ್ಲ.
ಪ್ರತಿ ಆರ್ಎಫ್ಐಡಿ ಟ್ಯಾಗ್ ವೆಚ್ಚ 54 ರೂ., ರೀಡರ್ ವೆಚ್ಚ 61000 ರೂ. ಇದೆ. ಸಿಮ್ ಆಧಾರಿತ ರೀಡರ್ ಇದಾಗಿದ್ದು, ಇದಕ್ಕೆ ಬಿಎಸ್ಎನ್ಎಲ್ ಸಿಮ್ ಬಳಕೆ ಮಾಡಲಾಗಿದೆ. ಒಬ್ಬ ಪೌರ ಕಾರ್ವಿುಕ ನಿತ್ಯ 250-300 ಮನೆಗಳ ಆರ್ಎಫ್ಐಡಿ ಟ್ಯಾಗ್ ರೀಡಿಂಗ್ ದಾಖಲಿಸಿಕೊಳ್ಳಬಹುದು. ಮುಂಬೈ ಮೂಲದ ಎನ್ಇಸಿ ಲಿಮಿಟೆಡ್ ಈ ಯೋಜನೆಯ ಗುತ್ತಿಗೆ ಪಡೆದಿದ್ದು, ಮುಂದಿನ 5 ವರ್ಷಗಳ ಕಾಲ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೋ ಟಿಪ್ಪರ್ಗೆ ಜಿಪಿಎಸ್ ಅಳವಡಿಕೆಯಾಗಲಿದೆ. ಅವಳಿ ನಗರದಲ್ಲಿ ಕಸ ಸಂಗ್ರಹಕ್ಕೆ 191 ಆಟೋ ಟಿಪ್ಪರ್ಗಳು ಬಳಕೆಯಲ್ಲಿವೆ. ಪ್ರತಿ ಆಟೋ ಟಿಪ್ಪರ್ ನಿತ್ಯ ಸಂಚರಿಸುವ ಮಾರ್ಗ ಜಿಪಿಎಸ್ನಲ್ಲಿ ದಾಖಲಾಗುತ್ತದೆ. ರಸ್ತೆ ಬದಿ, ಖಾಲಿ ಜಾಗ, ಉದ್ಯಾನಗಳಲ್ಲಿ ಕಸ ಎಸೆಯುವುದನ್ನು ನಿಯಂತ್ರಿಸಲು ಇದೇ ಯೋಜನೆಯಡಿ 174 ಕಡೆ ಕ್ಯಾಮರಾ ಅಳವಡಿಸಲಾಗುತ್ತಿದೆ. ಈಗಾಗಲೇ ಕೆಲವೆಡೆ ಅಳವಡಿಸಲಾಗಿದೆ.
ಅವಳಿ ನಗರದ ಕಸ ಸಂಗ್ರಹ, ವಿಲೇವಾರಿ ವ್ಯವಸ್ಥೆಯು ಇಂಟೆಗ್ರೇಟೆಡ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್ (ಐಸಿಸಿಸಿ) ಮೂಲಕ ನಿಯಂತ್ರಿಸಲಾಗುತ್ತಿದೆ. ಇದನ್ನು ನ್ಯೂ ಕಾಟನ್ ಮಾರ್ಕೆಟ್ ಸಾಂಸ್ಕೃತಿಕ ಭವನದ ಆವರಣದಲ್ಲಿ ಸ್ಥಾಪಿಸಲಾಗಿದೆ. ಐಸಿಸಿಸಿ ಕಟ್ಟಡ ನಿರ್ವಣ, ಆರ್ಎಫ್ಐಡಿ ಟ್ಯಾಗ್, ರೀಡರ್, ಜಿಪಿಎಸ್ ಹಾಗೂ 5 ವರ್ಷಗಳ ನಿರ್ವಹಣೆ ವೆಚ್ಚ ಎಲ್ಲ ಸೇರಿ 43.50 ಕೋ. ರೂ. ವೆಚ್ಚದ ಯೋಜನೆ ಇದಾಗಿದೆ.
ಅವಳಿ ನಗರದ 16 ವಾರ್ಡ್ಗಳಲ್ಲಿ ಆರ್ಎಫ್ಐಡಿ ಟ್ಯಾಗ್ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಮೊದಲಿಗೆ ಪಿಐಡಿ ಸಂಖ್ಯೆ ಇರುವವರ ಮನೆಗಳಿಗೆ ಮಾತ್ರ ಟ್ಯಾಗ್ ಅಳವಡಿಸಲಾಗುತ್ತಿದೆ. ಹಾಗಂತ ಪಿಐಡಿ ಸಂಖ್ಯೆ ಇಲ್ಲದ ಮನೆಗಳಿಂದ ಕಸ ಸಂಗ್ರಹಿಸುವುದನ್ನು ಕೈ ಬಿಡುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪಿಐಡಿ ಸಂಖ್ಯೆ ಇಲ್ಲದ ಮನೆಗಳಿಗೂ ಟ್ಯಾಗ್ ಅಳವಡಿಸುವ ಬಗ್ಗೆ ನಂತರ ನಿರ್ಧರಿಸಲಾಗುವುದು.ಡಾ. ಸುರೇಶ ಇಟ್ನಾಳ, ಪಾಲಿಕೆ ಆಯುಕ್ತರುಆಗಸ್ಟ್ 28ರ ವರೆಗೆ 51649 ಮನೆಗಳಿಗೆ ಆರ್ಎಫ್ಐಡಿ ಟ್ಯಾಗ್ ಹಾಕಲಾಗಿದೆ. ಹುಬ್ಬಳ್ಳಿ-ಧಾರವಾಡ ದಲ್ಲಿ 67 ವಾರ್ಡ್ಗಳಿದ್ದು, ವಸತಿ, ವಾಣಿಜ್ಯ, ಉದ್ಯಮ, ಎಲ್ಲ ಮಾದರಿಯ ಕಟ್ಟಡಗಳು ಸೇರಿ 2.78 ಲಕ್ಷ ಆಸ್ತಿಗಳಿವೆ. ನಾವು 3 ಲಕ್ಷದವರೆಗೆ ಅವಕಾಶ ಇಟ್ಟುಕೊಂಡಿದ್ದೇವೆ.ಎಸ್.ಎಚ್. ನರೇಗಲ್, ವಿಶೇಷಾಧಿಕಾರಿ, ಹು-ಧಾ ಸ್ಮಾರ್ಟ್ಸಿಟಿ ಲಿಮಿಟೆಡ್