

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರಾವಣ ಮಾಸ ನಿಮಿತ್ತ ಜನಸಾಗರ ಸಾಹಿತ್ಯ-ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯು ‘ಮನೆ-ಮನೆಗಳಲ್ಲಿ ಜಾನಪದ ಶ್ರಾವಣ’ ವಿಶೇಷ ಕಾರ್ಯಕ್ರಮವನ್ನು ಆ. 26ರಿಂದ ತಾಲೂಕಿನ ಮುಮ್ಮಿಗಟ್ಟಿಯಲ್ಲಿ ಹಮ್ಮಿಕೊಂಡಿದೆ ಎಂದು ಕಲಾವಿದ ಪ್ರಭು ಕುಂದರಗಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 2 ಗಂಟೆಗೆ ಗ್ರಾಮದ ಮೌನೇಶ್ವರ ದೇವಸ್ಥಾನ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜಾನಪದ ತಜ್ಞ ಡಾ. ರಾಮು ಮೂಲಗಿ ಉದ್ಘಾಟಿಸುವರು. ಜನಪದ ಗೀತೆ, ರಂಗಗೀತೆ, ಬಿಸುವ ಕಲ್ಲು ಪದ, ಸೋಬಾನ ಪದ, ಭಜನಾ ಪದ, ಇತರ ಕಲೆಗಳ ಉಳಿವಿಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ನಿತ್ಯವೂ ಒಬ್ಬೊಬ್ಬ ಕಲಾವಿದರ ಮನೆಯಲ್ಲಿ ಒಂದೊಂದು ರೀತಿ ಕಲೆಗಳ ಪ್ರದರ್ಶನ ನಡೆಯಲಿದೆ. ಮುಮ್ಮಿಗಟ್ಟಿ, ನರೇಂದ್ರ, ಮುಳಮುತ್ತಲ, ಗರಗ ಸೇರಿ ಇತರ ಗ್ರಾಮಗಳ ಕಲಾವಿರ ಮನೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಜನಸಾಗರ ಕಲಾ ಸಂಸ್ಥೆ 10ನೇ ವಾರ್ಷಿಕೋತ್ಸವ ನೆನಪಿಗಾಗಿ ಐವರು ಹಿರಿಯ ಕಲಾವಿದರಿಗೆ ಸನ್ಮಾನಿಸಲಾಗುವುದು ಎಂದರು.
ಸುರೇಶ ಹಾರೋಬಿಡಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.