

ಬೆಳಗಾವಿ: ಕನ್ನಡವನ್ನು ಕನ್ನಡಕ ಮಾಡಿಕೊಳ್ಳದೆ ಕಣ್ಣಾಗಿಸಿಕೊಂಡು ಕನ್ನಡಮ್ಮಳ ಸೇವೆ ಮಾಡಬೇಕು. ಕನ್ನಡ ಕನ್ನಡಿಯೊಳಗಿನ ಗಂಟಾಗಬಾರದು. ಪ್ರತಿ ಕನ್ನಡಿಗನೂ ಮನೆ, ಮನಗಳಿಗೆ ಕನ್ನಡ ತಲುಪಿಸುವ ಕೆಲಸ ಮಾಡಬೇಕು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದ್ದಾರೆ.
ನಗರದ ಕನ್ನಡಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲೆಯ ಕಾರ್ಯಕಾರಿ ಸಮಿತಿಗೆ ಧ್ವಜ ಹಸ್ತಾಂತರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಕನ್ನಡಕ್ಕಾಗಿ ಕೈ ಎತ್ತುವುದಷ್ಟೇ ಅಲ್ಲದೆ, ಸಂದರ್ಭ ಬಂದರೆ ಕನ್ನಡಕ್ಕಾಗಿ ಜೀವ ಕೊಡಲೂ ಪಣ ತೊಡಬೇಕು. ಕನ್ನಡ ನಾಡು-ನುಡಿ ಉಳಿಸಿ ಬೆಳಸುವುದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ಬದುಕನ್ನು ಕನ್ನಡಕ್ಕಾಗಿ ಮೀಸಲಿಟ್ಟಾಗ ಮಾತ್ರ ನಮ್ಮ ನಾಡು-ನುಡಿ ರಕ್ಷಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಸಾಪ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಕನ್ನಡದ ಕೆಲಸ ಸೇವೆ ಎಂದು ತಿಳಿದು ಮಾಡಬೇಕು. ಕನ್ನಡ ಕಟ್ಟುವ ಕೆಲಸಕ್ಕೆ ಬದ್ಧರಾಗಬೇಕು. ಬೆಳಗಾವಿ ಜಿಲ್ಲೆ ಗಡಿ ಜಿಲ್ಲೆಯಾಗಿರುವುದರಿಂದ ಪ್ರತಿ ಕನ್ನಡಿಗನೂ ಕನ್ನಡ ಸಾಹಿತ್ಯ ಪರಿಷತ್ ಜತೆಗೆ ನಿಂತು ಸಹಕಾರ ನೀಡಿ ಕನ್ನಡದ ಚಟುವಟಿಕೆ, ಅಭಿವೃದ್ಧಿ, ರಕ್ಷಣೆ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಕಸಾಪ ತಾಲೂಕು ಘಟಕಗಳ ನೂತನ ಅಧ್ಯಕ್ಷರಿಗೆ ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಶಾಲು ಹೊದಿಸಿ ಕನ್ನಡದ ಕೊರಳು ಪಟ್ಟಿ ನೀಡಿ, ಕಸಾಪ ಧ್ವಜ ಹಸ್ತಾಂತರಿಸಲಾಯಿತು. ಸಾಹಿತಿ ವೀರಣ್ಣ ಕಲ್ಲಪ್ಪ ಗಿರಿಮಲ್ಲಣವರ ಅವರ ‘ಸನ್ಮಾರ್ಗಿ ನೀನಾಗು’ ವಚನಾಂಜಲಿ ಕೃತಿ ಲೋಕಾರ್ಪಣೆಗೊಳಿಸಲಾಯಿತು. ಇದಕ್ಕೂ ಮುನ್ನ, ಇತ್ತೀಚೆಗೆ ಅಗಲಿದ ಸಾಹಿತಿ ಚಂದ್ರಶೇಖರ ಪಾಟೀಲ, ಬಸಲಿಂಗಯ್ಯ ಹಿರೇಮಠ, ಲತಾ ಮಂಗೇಶ್ಕರ್, ಇಬ್ರಾಹಿಂ ಸುತಾರ, ಸುನೀತಾ ಮೊರಬದ, ಶೀನಿವಾಸ ಕುಲಕರ್ಣಿ ಅವರ ನಿಧನಕ್ಕೆ ಶೋಕ ವ್ಯಕ್ತ ಪಡಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷ ಮೋಹನ ಪಾಟೀಲ, ಪ್ರೊ.ಚಂದ್ರಶೇಖರ ಅಕ್ಕಿ, ಡಾ.ಬಾಳಾಸಾಹೇಬ
ಲೋಕಾಪುರೆ, ಬಿ.ವಿ. ನರಗುಂದ, ಡಾ.ಎಸ್.ಎಸ್.ಅಂಗಡಿ, ಪ್ರೊ. ಎಲ್.ವಿ. ಪಾಟೀಲ, ಡಾ. ಎಚ್.ಬಿ. ಕೋಲಕಾರ, ಡಾ. ಎಚ್.ಐ. ತಿಮ್ಮಾಪುರ, ಬಾಲಶೇಖರ ಬಂದಿ, ಡಾ.ಸ್ಮೀತಾ ಸುರೇಬಾನಕರ, ಶೈಲಜಾ ಬಿಂಗೆ ಇತರರಿದ್ದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಂ.ವೈ. ಮೆಣಶಿನಕಾಯಿ ಸ್ವಾಗತಿಸಿದರು. ವೀರಭದ್ರ ಅಂಗಡಿ ವಂದಿಸಿದರು. ಪ್ರತಿಭಾ ಕಳ್ಳಿಮಠ ನಿರೂಪಿಸಿದರು.