

ಲಿಂಗಸುಗೂರು: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಕೇವಲ ಭಾಷೆಯಲ್ಲ, ಇದು ನಾಡಿನ ಸರ್ವ ಜನಾಂಗದ ಅಸ್ಮಿತೆಯಾಗಿದ್ದು, ಅಖಂಡ ಕರ್ನಾಟಕ ರಕ್ಷಣೆಗೆ ನಾವೆಲ್ಲ ಕಟಿಬದ್ಧರಾಗಿರಬೇಕೆಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಂಗಳವಾರ ಮಾತನಾಡಿದರು. ಅಖಿಲ ಭಾರತ ಮಟ್ಟದಲ್ಲಿ ಕನ್ನಡ ಭಾಷೆಗೆ ಅಗ್ರ ಸ್ಥಾನವಿದ್ದು, ಎಂಟು ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು ಕನ್ನಡಿಗರ ಪಾಲಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಆಗಾಗ ಕೇಳಿ ಬರುತ್ತಿದ್ದು, ಅಖಂಡ ಕರ್ನಾಟಕ ಹೋಳಾಗದಂತೆ, ಏಕತೆಗೆ ಧಕ್ಕೆ ಉಂಟಾಗದಂತೆ ನಾಡಿನೆಲ್ಲೆಡೆ ಮನೆ ಮನಗಳಲ್ಲಿ ಕನ್ನಡದ ಕಂಪು ಪಸರಿಸಬೇಕು. ಕನ್ನಡ ನಮ್ಮ ನಾಲಿಗೆಗಳಲ್ಲಿ ಸ್ಪಷ್ಟ ಮತ್ತು ಸ್ಫುಟವಾಗಿ ನಲಿದಾಡಬೇಕು ಎಂದು ಹೇಳಿದರು.
ಗಡಿ ವಿವಾದದ ನೆಪದಲ್ಲಿ ನೆರೆ ರಾಜ್ಯಗಳು ಕನ್ನಡದ ನೆಲ, ಜಲಕ್ಕೆ ಕುತ್ತು ತರುವ ಕೆಲಸ ಮಾಡುತ್ತಿದ್ದು, ಕನ್ನಡದ ನೆಲ, ಜಲಕ್ಕೆ ಅನ್ಯರು ಮೂಗು ತೂರಿಸದಂತೆ ಎಚ್ಚರ ವಹಿಸಬೇಕಿದೆ. ಕನ್ನಡ ಸಾಹಿತ್ಯಾಭಿರುಚಿಯನ್ನು ಯುವ ಪೀಳಿಗೆಯಲ್ಲಿ ಬೆಳೆಸಬೇಕಿದೆ. ಕನ್ನಡ ವ್ಯವಹಾರಿಕ ಭಾಷೆಯಾಗಿ ನಿತ್ಯವೂ ಪಾಲಿಸಬೇಕು. ಉತ್ತರ-ದಕ್ಷಿಣ, ಜಾತಿ, ಮತಗಳ ಭೇದವಿಲ್ಲದೆ ಅಖಂಡ ಕರ್ನಾಟಕ ರಕ್ಷಣೆ ಎಲ್ಲರ ಹೊಣೆಯಾಗಿದೆ ಗುರುಬಸವ ಮಹಾಸ್ವಾಮಿಗಳು ಹೇಳಿದರು.
ಗ್ರೇಡ್-2 ತಹಸೀಲ್ದಾರ್ ಬಸವರಾಜ ಝಳಕಿಮಠ, ಟಿಎಚ್‌ಒ ಡಾ.ಅಮರೇಶ ಪಾಟೀಲ್, ಪಿಐ ಪುಂಡಲೀಕ ಪಟಾತ್ತಾರ್, ಕರವೇ ಜಿಲ್ಲಾಧ್ಯಕ್ಷ ಗಂಗಣ್ಣ ಡಿಶ್, ಜಿಲ್ಲಾ ವಕ್ತಾರ ಶಾಂತಗೌಡ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನ್ನಡಾಂಬೆಯ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.
ಪ್ರಮುಖರಾದ ಖಾದರಪಾಷಾ, ಭೂಪನಗೌಡ ಪಾಟೀಲ್, ಫಯಾಜ್ ಮನಿಯಾರ್, ಜಿಲಾನಿಪಾಷಾ, ನಂದಪ್ಪ ದೇವದುರ್ಗ, ರಾಮಕೃಷ್ಣ ಭಜಂತ್ರಿ, ದುರುಗರಾಜ ಮಸ್ಕಿ ಇತರರು ಇದ್ದರು.