ಮನೆ, ಬೆಳೆ ಹಾನಿ ಸಮೀಕ್ಷೆ ಶೀಘ್ರವಾಗಲಿ

24 NRD-2, Maitri Vinod.
Published on

ನರಗುಂದ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆ ಹಾಗೂ ಮಲಪ್ರಭೆ ನದಿ, ಬೆಣ್ಣೆಹಳ್ಳದ ಪ್ರವಾಹದಿಂದ ಹಾನಿಯಾಗಿರುವ ಮನೆ ಮತ್ತು ಬೆಳೆ ಹಾನಿ ಸಮೀಕ್ಷೆಯನ್ನು ಕ್ಷಿಪ್ರಗತಿಯಲ್ಲಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಹಸೀಲ್ದಾರ್ ಎ.ಡಿ. ಅಮರವದಗಿ ಸೂಚಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರವಾಹ ಪರಿಸ್ಥಿತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲೂಕಿನಾದ್ಯಂತ ಸುರಿದ ನಿರಂತರ ಮಳೆಗೆ 100ಕ್ಕೂ ಅಧಿಕ ಮನೆಗಳು ಭಾಗಶಃ ಕುಸಿದಿವೆ. ಬೆಣ್ಣೆಹಳ್ಳ ಮತ್ತು ಮಲಪ್ರಭಾ ನದಿ ಪ್ರವಾಹದಿಂದ ವಿವಿಧ ಗ್ರಾಮಗಳಲ್ಲಿ ಬೆಳೆ ಹಾನಿಯಾಗಿದೆ. 2500 ಹೆಕ್ಟೇರ್​ನಲ್ಲಿ ಬೆಳೆದಿದ್ದ ತೋಟಗಾರಿಕೆ ಬೆಳೆಗಳ ಪೈಕಿ 280 ಹೆಕ್ಟೇರ್ ಉಳ್ಳಾಗಡ್ಡಿ, 20 ಹೆಕ್ಟೇರ್ ಮೆಣಸಿನಕಾಯಿ, 20 ಹೆಕ್ಟೇರ್ ಟೊಮ್ಯಾಟೊ ಸೇರಿ ಒಟ್ಟು 425ಹೆಕ್ಟೇರ್​ನಲ್ಲಿ ಬೆಳೆದಿದ್ದ ವಿವಿಧ ತರಕಾರಿ ಬೆಳೆಗಳು ಜಲಾವೃತಗೊಂಡು ಹಾನಿಯಾಗಿವೆ. 15 ಸಾವಿರ ಹೆಕ್ಟೇರ್​ನಲ್ಲಿ ಬೆಳೆದಿದ್ದ ಹೆಸರು ಬೆಳೆಯಲ್ಲಿ 7755 ಹೆಕ್ಟೇರ್ ಹೆಸರು ಸಂಪೂರ್ಣ ಹಾನಿಯಾಗಿದೆ. ಹತ್ತಿ, ಗೋವಿನಜೋಳ, ಕಬ್ಬು, ಶೇಂಗಾ ಸೇರಿ ಇನ್ನುಳಿದ ಪ್ರಮುಖ ಬೆಳೆಗಳು ಪ್ರವಾಹದಲ್ಲಿ ಹಾನಿಯಾಗಿವೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಆಗಿರುವ ಮತ್ತು ಮನೆಗಳು ಬಿದ್ದ ಸ್ಥಳಗಳಿಗೆ ಭೇಟಿ ನೀಡಿ ವಾಸ್ತವಿಕ ನೆಲೆಗಟ್ಟಿನಲ್ಲಿ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಬೇಕು ಎಂದರು.

ತಾಪಂ ಇಒ ಚಂದ್ರಶೇಖರ ಕುರ್ತಕೋಟಿ ಮಾತನಾಡಿ, ಮಳೆಯಿಂದಾಗಿ ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಮನೆಗಳು ಬಿದ್ದಿದ್ದರೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಪ್ರವಾಹ ಪೀಡಿತ ಗ್ರಾಮಗಳ ಜನರಿಗೆ ಪ್ರವಾಹ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ರಸ್ತೆ ಸಂಪರ್ಕ ಕಡಿತಗೊಂಡಿದ್ದರೆ ತಕ್ಷಣವೇ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಂಜೀವ ಚವ್ಹಾಣ, ಸಹಾಯಕ ಕೃಷಿ ನಿರ್ದೇಶಕಿ ಮೈತ್ರಿ ವಿನೋದ, ಎಂ.ಡಿ. ತೂಗುಣಸಿ, ಸಂಗಮೇಶ ಬ್ಯಾಳಿ, ರೂಪಾ ಗಂಧದ, ರವಿ ಬಡಿಗೇರ, ಎ.ಆರ್. ಭೋವಿ, ಶಶಿಕಾಂತ ಹೆಗಡೆ, ಕೆ.ಎಸ್. ಹಾದಿಮನಿ, ವಿ.ಆರ್. ರಾಯನಗೌಡ್ರ, ಎಸ್.ಎನ್. ಹರನಟ್ಟಿ, ಶಿವಾನಂದ ಉಪ್ಪಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net