ಮನೆ ಬೀಗ ಮುರಿದು ಹಣ ದೋಚಿದ್ದ ಖಧೀಮನ ಬಂಧನ

ಮನೆ ಬೀಗ ಮುರಿದು ಹಣ ದೋಚಿದ್ದ ಖಧೀಮನ ಬಂಧನ
Published on


ಅರಕಲಗೂಡು: ಮನೆ ಬೀಗ ಮುರಿದು ಲಕ್ಷಾಂತರ ರೂ. ದೋಚಿ ಪರಾರಿಯಾಗಿದ್ದ ಖಧೀಮನನ್ನು ಕೊಣನೂರು ಪೊಲೀಸರು ಬಂಧಿಸಿ, 6.11ಲಕ್ಷ ರೂ ನಗದು, 2 ಬೈಕ್, ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ತಾಲೂಕಿ ಮುತ್ತೂಗದ ಹೊಸೂರು ನಿವಾಸಿ ಅಭಿ ಅಲಿಯಾಸ್ ಅಭಿಷೇಕ್(22) ಬಂಧಿತ ಆರೋಪಿ.

ರಾಮಣ್ಣ ಅವರು ಮನೆಗೆ ಬೀಗ ಹಾಕಿಕೊಂಡು ಅ. 10 ರಂದು ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಿದ್ದು, ಮರುದಿನ ಮಧ್ಯಾಹ್ನ ವಾಪಾಸ್ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಮನೆಯ ಬೀರುವಿನಲ್ಲಿದ್ದ 12 ಲಕ್ಷ ರೂ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ರಾಮಣ್ಣ ಅವರು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಹೊಳೆನರಸೀಪುರ ಉಪ ವಿಭಾಗದ ಡಿವೈಎಸ್ ಪಿ ಮುರಳಿಧರ್ ನೇತೃತ್ವದಲ್ಲಿ ಅರಕಲಗೂಡು ವೃತ್ತ ನಿರೀಕ್ಷಕ ರಘುಪತಿ, ಕೊಣನೂರು ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದ್ದರು. ಅ.19ರಂದು ಬೆಳಗ್ಗೆ 11.30 ರ ವೇಳೆ ಬೈಕ್ ನಲ್ಲಿ ಬರುತ್ತಿದ್ದ ಆರೋಪಿಯನ್ನು ತಡೆದು ವಿಚಾರಣೆ ನಡೆಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯಿಂದ 6.10 ಲಕ್ಷ ರೂ ನಗದು, ಪಲ್ಸರ್, ಬುಲೆಟ್ ಬೈಕ್, ಮೊಬೈಲ್ ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net