

ಕೋಲಾರ: ದೇಶದಲ್ಲೇ ಮೊದಲ ಬಾರಿಗೆ ಮೈಕ್ರೋ ಎಟಿಎಂಗೆ ಡಿಸಿಸಿ ಬ್ಯಾಂಕಿನಿಂದ ಚಾಲನೆ ನೀಡಲಾಗಿದ್ದು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಸಮಸ್ತ ಗ್ರಾಹಕರು ಇದರ ಪ್ರಯೋಜನ ಪಡೆಯಬೇಕು ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ಮಾಲೂರು ತಾಲೂಕಿನ ಟೇಕಲ್ ಹೋಬಳಿಗೆ ಸೇರಿದ ದಿನ್ನೇರಿಹಾರೋಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯ 58 ಸ್ತ್ರೀಶಕ್ತಿ ಸಂಘಗಳಿಗೆ 2.75 ಕೋಟಿ ರೂ. ಸಾಲ ವಿತರಿಸಿ ಮಾತನಾಡಿದರು.
ಮಹಿಳೆಯರು ಇನ್ನು ಮುಂದೆ ಸಂಘದ ಕಾರ್ಯದರ್ಶಿಗೆ ಒಂದು ಸಂದೇಶ ಇಲ್ಲವೇ, ಕರೆ ಮಾಡಿದರೆ ಸಿಬ್ಬಂದಿ ಮನೆ ಬಾಗಿಲಿಗೆ ಬಂದು ಮೈಕ್ರೋ ಎಟಿಎಂ ಮೂಲಕ ಹಣ ನೀಡುತ್ತಾರೆ ಮತ್ತು ಸಂಘಕ್ಕೆ ಹಣ ಪಾವತಿಸುವುದಕ್ಕೂ ಇದರಿಂದ ಅನುಕೂಲವಾಗಲಿದೆ, ತಕ್ಷಣ ರಸೀದಿ ಸಿಗುವುದರಿಂದ ಅವ್ಯವಹಾರಕ್ಕೆ ಅವಕಾಶವಿರುವುದಿಲ್ಲ ಎಂದರು.
ಪ್ರತಿ ಸಂಘದಿಂದ ತಲಾ 10 ಮಂದಿ ಬ್ಯಾಂಕ್ ಖಾತೆ ತೆರೆದಿದ್ದರೆ ಎಲ್ಲ ಸದಸ್ಯರಿಗೂ ಪ್ರತ್ಯೇಕ ಎಟಿಎಂ ಕಾರ್ಡ್ ನೀಡುವುದರಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಲಿದ್ದು, ನಿಮ್ಮ ಹಣ ಸುರಕ್ಷಿತವಾಗಿರುತ್ತದೆ ಎಂದರು.
ದೇಶದಲ್ಲೇ ಮೊದಲ ಬಾರಿಗೆ ಕೋಲಾರ ಜಿಲ್ಲೆಯ ದಿನ್ನೇರಿಹಾರೋಹಳ್ಳಿಯ ಕೃಷಿ ಪತ್ತಿನ ಸೊಸೈಟಿಯಲ್ಲಿ ಸಾಂಕೇತಿಕವಾಗಿ ಮೈಕ್ರೋ ಎಟಿಎಂಗೆ ಚಾಲನೆ ನೀಡಲಾಗಿದ್ದು ನಾಳೆಯಿಂದ ಎರಡೂ ಜಿಲ್ಲೆಯಲ್ಲಿ ಗ್ರಾಹಕರಿಗೆ ಎಟಿಎಂ ಕಾರ್ಡ್ ವಿತರಣೆ ಮಾಡಲಾಗುವುದು ಎಂದರು.
ಶಾಸಕರ ಸಂತಸ: ಶಾಸಕ ಕೆ.ವೈ.ನಂಜೇಗೌಡ ಮೈಕ್ರೋ ಎಟಿಎಂಗೆ ಚಾಲನೆ ನೀಡಿ, ಎರಡು ಜಿಲ್ಲೆಗಳ ರೈತರು, ತಾಯಂದಿರಿಗೆ ಸಾಲ ಸೌಲಭ್ಯ ಸಿಗುವಂತಾಗಲು ಮತ್ತು ಡಿಸಿಸಿ ಬ್ಯಾಂಕ್ ಇಷ್ಟೊಂದು ಅಭಿವೃದ್ಧಿ ಹೊಂದಲು ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮತ್ತವರ ತಂಡದ ಪರಿಶ್ರಮ ಕಾರಣ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಚನ್ನರಾಯಪ್ಪ, ದಿನ್ನೇರಿ ಹಾರೋಹಳ್ಳಿ ಸೊಸೈಟಿ ಅಧ್ಯಕ್ಷ ಎಸ್.ರಾಜಪ್ಪ, ಉಪಾಧ್ಯಕ್ಷ ವೆಂಕಟಸ್ವಾಮಿ, ಸಂಸ್ಥಾಪಕ ಕೆಂಚಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಎಸ್.ವಿ.ಗೋವರ್ದನ್‌ರೆಡ್ಡಿ, ಹುಳದೇನಹಳ್ಳಿ ಸೊಸೈಟಿ ಅಧ್ಯಕ್ಷರಾದ ಎಚ್.ವಿ.ಚಂದ್ರಶೇಖರಗೌಡ, ನಾರಾಯಣಸ್ವಾಮಿ, ಟಿ.ಪಿ.ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಕೃಷ್ಣಪ್ಪ, ಸಿಇಒ ತಿರುಮಲೇಗೌಡ, ಸಂಘದ ನಿರ್ದೇಶಕರಾದ ಶಂಕರಪ್ಪ, ದೇವರಾಜ್ ಮತ್ತಿತರರಿದ್ದರು.
ನನ್ನ ಕ್ಷೇತ್ರಕ್ಕೆ ಮೊದಲು ಮೈಕ್ರೋ ಎಟಿಎಂ ಸೌಲಭ್ಯ ದೊರೆತಿರುವುದು ಸಂತಸವನ್ನುಂಟು ಮಾಡಿದೆ. ಸಂಘದ ಎಲ್ಲ ಸದಸ್ಯರಿಗೆ ಮನೆ ಬಾಗಿಲಿಗೆ ಹಣ ಸಂದಾಯವಾಗುತ್ತದೆ. ದಿನ್ನೇರಿಹಾರೋಹಳ್ಳಿ ಸೊಸೈಟಿಗೆ 11 ಕೋಟಿ ರೂ. ಸಾಲ ಕೊಡುವ ಮೂಲಕ ಮಹಿಳೆಯರು ಮತ್ತು ರೈತರ ಪರ ಬ್ಯಾಂಕ್ ಕಾಳಜಿ ತೋರಿದೆ. ಕೆ.ವೈ.ನಂಜೇಗೌಡ, ಶಾಸಕ