ಮನೆ ಬಾಗಿಲಿಗೆ ಜಾನುವಾರು ತುರ್ತು ಚಿಕಿತ್ಸಾ ವಾಹನ

IMG-20230824-WA0036
Published on

ಆರ್.ಕೃಷ್ಣ ಮೈಸೂರು
ಜನರಿಗೆ ತುರ್ತು ಚಿಕಿತ್ಸೆ ನೀಡುವ ರೀತಿಯಲ್ಲಿಯೇ ಜಾನುವಾರುಗಳಿಗೂ ತುರ್ತು ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ತುರ್ತು ಚಿಕಿತ್ಸಾ ವಾಹನಗಳು ಕಾರ್ಯನಿರ್ವಹಿಸಲಿವೆ.
ಮನೆ ಬಾಗಿಲಿಗೆ ತೆರಳಿ ಜಾನುವಾರುಗಳ ಆರೋಗ್ಯ ಸೇವೆ ಮಾಡಲು ಜಿಲ್ಲಾದ್ಯಂತ ಪ್ರತಿ ತಾಲೂಕಿನಲ್ಲಿ ತುರ್ತು ಚಿಕಿತ್ಸಾ ವಾಹನಗಳನ್ನು ನಿಯೋಜಿಸಲಾಗುತ್ತಿದೆ.
ಜಾನುವಾರುಗಳ ಆರೋಗ್ಯ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಪಶುಸಂಗೋಪನಾ ಇಲಾಖೆ ಮುಂದಿನ ಒಂದೆರಡು ದಿನಗಳಲ್ಲಿ ಮೈಸೂರಿನಲ್ಲಿ 11 ಸಂಚಾರ ತುರ್ತು ಚಿಕಿತ್ಸಾ ಸೇವೆಯನ್ನು ಆರಂಭಿಸಲಿದೆ.
ಮೈಸೂರು ನಗರ ವ್ಯಾಪ್ತಿ ಮತ್ತು ಪಿರಿಯಾಪಟ್ಟಣದಲ್ಲಿ ತಲಾ ಎರಡು ವಾಹನಗಳು, ಎಚ್.ಟಿ.ಕೋಟೆ, ಹುಣಸೂರು, ತಿ.ನರಸೀಪುರ, ನಂಜನಗೂಡು, ಕೆ.ಆರ್.ನಗರ, ಸಾಲಿಗ್ರಾಮ, ಸರಗೂರು ತಾಲೂಕುಗಳಿಗೆ ತಲಾ ಒಂದು ವಾಹನದ ಸೇವೆ ಸಿಗಲಿದೆ. ಈಗಾಗಲೇ ಹೊರಗುತ್ತಿಗೆ ಆಧಾರದ ಮೇಲೆ ಪ್ರತಿ ವಾಹನಕ್ಕೆ ಚಾಲಕ, ಸಹಾಯಕ, ವೈದ್ಯರು, ತಾಂತ್ರಿಕ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ.

ವಾಹನದಲ್ಲಿ ಏನೇನು ಸೌಲಭ್ಯವಿದೆ?
ವಾಹನದಲ್ಲಿ ಸಂಚಾರ ತುರ್ತು ಚಿಕಿತ್ಸೆಗೆ ಬೇಕಾದ ಔಷಧಗಳು, ಸಣ್ಣ ಶಸಚಿಕಿತ್ಸೆಗೆ ಬೇಕಾದ ಸಲಕರಣೆಗಳು, ಲಸಿಕೆ ಇಟ್ಟುಕೊಳ್ಳಲು ರೆಫ್ರಿಜರೇಟರ್ ಇರುತ್ತದೆ. ತಕ್ಷಣಕ್ಕೆ ಬೇಕಾದ ಚಿಕಿತ್ಸೆ ನೀಡುವ ಮೂಲಕ ಸೇವೆ ವಿಳಂಬದಿಂದ ಆಗುತ್ತಿದ್ದ ಆರೋಗ್ಯ ಸಮಸ್ಯೆಯನ್ನು ತಪ್ಪಿಸಿ ಮುಂದುವರಿದ ಚಿಕಿತ್ಸೆಗೆ ಸಮೀಪದ ಉನ್ನತ ದರ್ಜೆ ಆಸ್ಪತ್ರೆಗೆ ರವಾನಿಸಲಾಗುತ್ತದೆ.
ಈ ತುರ್ತು ವಾಹನದಿಂದ ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲವಾಲಿದೆ. ಸಾಮಾನ್ಯವಾಗಿ ಕೆಲವೊಂದು ಕುಟುಂಬದಲ್ಲಿ ಕೇವಲ ಒಬ್ಬರೇ ಮಹಿಳೆಯರು ಇರುತ್ತಾರೆ. ಅವರು ಜಾನುವಾರು ಸಾಕಣೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುತ್ತಾರೆ. ಇಲ್ಲವೇ ಕೆಲವೊಂದು ಕುಟುಂಬದಲ್ಲಿ ವಯಸ್ಸಾದ ಹಿರಿಯರು ಇರುತ್ತಾರೆ. ಅವರು ಅನಾರೋಗ್ಯದಿಂದ ಬಳಲುತ್ತಿರುವ ಜಾನುವಾರುಗಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗುವುದಿಲ್ಲ. ಅಂತಹವರಿಗೆ ಈ ಯೋಜನೆ ಅತ್ಯುಪಯುಕ್ತವಾಗಿದೆ.

ತುರ್ತು ಸೇವೆಯಲ್ಲಿರುವ ಸಿಬ್ಬಂದಿ ತಾವು ಗ್ರಾಮಗಳಿಗೆ ತೆರಳಿದ ಸಂದರ್ಭದಲ್ಲಿ ಇಲಾಖೆಯಿಂದ ಜನಸಾಮಾನ್ಯರಿಗೆ ದೊರೆಯುತ್ತಿರುವ ಸೌಲಭ್ಯಗಳು, ಜಾನುವಾರು ಸಾಕಣೆ ಕುರಿತು ಅರಿವು ಮೂಡಿಸುತ್ತಾರೆ. ಕಾಲುಬಾಯಿ ರೋಗ, ಚರ್ಮಗಂಟು ರೋಗದಂತಹ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸುವ ಕಾಯಿಲೆಗಳು ಎದುರಾದಾಗ ಅವುಗಳನ್ನು ನಿಯಂತ್ರಿಸಲು ಈ ಯೋಜನೆ ಸಹಕಾರಿಯಾಗಿದೆ.

1962ಕ್ಕೆ ಕರೆ ಮಾಡಿ

ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಅಗತ್ಯ ಇರುವ ರೈತರು ಉಚಿತ ಸಹಾಯವಾಣಿ 1962ಕ್ಕೆ ಕರೆ ಮಾಡಬೇಕು. ಆಸ್ಪತ್ರೆ ಇಲ್ಲದ, ಆಸ್ಪತ್ರೆಯಿಂದ ದೂರ ಇರುವ ಗ್ರಾಮಗಳಲ್ಲಿ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಮಾಡಬೇಕಾಗಿ ಬಂದಲ್ಲಿ ಸಹಾಯವಾಣಿಗೆ ಕರೆ ಮಾಡಿದರೆ ವಾಹನಗಳು, ಚಿಕಿತ್ಸೆ ಲಭ್ಯವಾಗುತ್ತದೆ. ಕಾಲ್‌ಸೆಂಟರ್‌ನಿಂದ ಮಾಹಿತಿ ಪಡೆಯುವ ತುರ್ತು ಚಿಕಿತ್ಸಾ ವಾಹನ ಸಿಬ್ಬಂದಿ ಜಾನುವಾರಿಗೆ ನೀಡಬೇಕಿರುವ ಚಿಕಿತ್ಸೆಯ ತೀವ್ರತೆಯನ್ನು ಪರಿಶೀಲಿಸುತ್ತಾರೆ. ಒಂದು ವೇಳೆ ಜಾನುವಾರು ನಡೆದಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕೂಡಲೇ ಚಿಕಿತ್ಸೆ ಅಗತ್ಯ ಇದೆ ಎಂದು ಕಂಡುಬಂದಲ್ಲಿ ತಕ್ಷಣ ಅಲ್ಲಿಗೆ ಧಾವಿಸಿ ಚಿಕಿತ್ಸೆ ಕೊಡಿಸುತ್ತಾರೆ. ಇಲ್ಲವೇ ಜಾನುವಾರುಗೆ ಸ್ವಲ್ಪ ಸಮಯದ ನಂತರವೂ ಚಿಕಿತ್ಸೆ ನೀಡಬಹುದು ಎಂದಾದರೆ ಅಂತಹ ಸಂದರ್ಭದಲ್ಲಿ ಅವುಗಳನ್ನು ಸಮೀಪದಲ್ಲಿರುವ ಪಶು ಚಿಕಿತ್ಸಾಲಯಕ್ಕೆ ಕರೆದುಕೊಂಡು ಹೋಗುವಂತೆ ಸಲಹೆ ನೀಡುತ್ತಾರೆ.

ವ್ಯಾಪಕ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ
ಮೈಸೂರು ಮುಖ್ಯಮಂತ್ರಿಗಳ ತವರು ಜಿಲ್ಲೆ ಎಂಬುದರ ಜತೆಗೆ, ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಇಲಾಖೆ ಸಚಿವರ ಜಿಲ್ಲೆಯೂ ಆಗಿದೆ. ಹಾಗಾಗಿ, ಅವರ ಮಾರ್ಗದರ್ಶನದಲ್ಲಿ ತುರ್ತು ಚಿಕಿತ್ಸೆ ನೀಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾದ್ಯಂತ ಈ ಯೋಜನೆ ಕುರಿತು ವ್ಯಾಪಕ ಅಭಿಯಾನ ನಡೆಸಲು ಉದ್ದೇಶಿಸಲಾಗಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು.
ಡಾ.ನಾಗರಾಜು, ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net