ಮನೆ ಬಾಗಿಲಿಗೆ ಇ-ಆಸ್ತಿ ಸೇವೆ

CMC
Published on

ಚಿತ್ರದುರ್ಗ: ಸತತ ಒಂದು ತಿಂಗಳು ಮನೆ ಬಾಗಿಲಿಗೆ ಇ-ಆಸ್ತಿ ಸೇವೆ ಒದಗಿಸಲು ನಗರಸಭೆ ಮುಂದಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದರು.

ಮನೆ ಬಾಗಿಲಿಗೆ ಇ-ಆಸ್ತಿ ಸೇವೆ, ತೆರಿಗೆ ಆಂದೋಲನ ಅಂಗವಾಗಿ ಲಕ್ಷ್ಮ್ಮಿಬಜಾರ್‌ನ ಜೈನ್ ದೇಗುಲ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರಸಭೆ ವ್ಯಾಪ್ತಿಯ ಸಾರ್ವಜನಿಕರು ಬಾಕಿಯಿರುವ ತೆರಿಗೆ ಪಾವತಿಸುವ ಮೂಲಕ ನಗರದ ಅಭಿವೃದ್ಧಿಗೆ ಸಹಕರಿಸಬೇಕು. ಅಲ್ಲದೆ, ಎಲ್ಲ ಆಸ್ತಿಗಳನ್ನು ಕೆಎಂಎಫ್-24 ಆಸ್ತಿ ಕಣಜ ತಂತ್ರಾಂಶದಲ್ಲಿ ದಾಖಲಿಸಲು ಸಾರ್ವಜನಿಕರ ಆಸ್ತಿಗಳಿಗೆ ಇ-ಆಸ್ತಿ ಖಾತಾ ಮಾಡಿಕೊಡಬೇಕಿದೆ ಎಂದರು.

ಒಟ್ಟು 39,518 ಆಸ್ತಿಗಳಿದ್ದು, ಅದರಲ್ಲಿ 20,221ಕ್ಕೆ ಇ-ಖಾತೆ ನೀಡಲಾಗಿದೆ. ಇನ್ನುಳಿದ 19,297ರ ಪೈಕಿ ಸುಮಾರು 10 ಸಾವಿರ ‘ಬಿ’ ಖಾತಾ ವ್ಯಾಪ್ತಿಗೆ, 9 ಸಾವಿರ ಆಸ್ತಿಗಳಿಗೆ ಇ-ಖಾತೆ ನೀಡಬೇಕಾಗಿದೆ. ಹೀಗಾಗಿ ನಗರದ 35 ವಾರ್ಡ್‌ಗಳಲ್ಲೂ ಮಾ. 12ರವರೆಗೆ ಆಂದೋಲನ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ತಮ್ಮ ಆಸ್ತಿಗಳ ತೆರಿಗೆ ಪಾವತಿಸಿ, ಇ-ಆಸ್ತಿ ಪಡೆದುಕೊಳ್ಳಿ. ಅಗತ್ಯ ದಾಖಲಾತಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಮನೆ ಬಾಗಿಲಿಗೆ ತಲುಪಲಿದೆ ಎಂದು ಹೇಳಿದರು.

ಇದೇ ವೇಳೆ ಲಕ್ಷ್ಮ್ಮಿಬಜಾರ್, ಜೈನ್ ಟೆಂಪಲ್ ಸೇರಿ ಸುತ್ತಮುತ್ತಲಿನ ಮನೆಗಳು, ಅಂಗಡಿ ಮಾಲೀಕರಿಗೆ ಕರಪತ್ರಗಳನ್ನು ವಿತರಿಸಿ ಇ-ಆಸ್ತಿಗೆ ಅರ್ಜಿ ಸಲ್ಲಿಸುವಂತೆ ಕೋರಲಾಯಿತು.

ಸಲ್ಲಿಸಬೇಕಾದ ದಾಖಲೆಗಳೇನು?
ಇ-ಆಸ್ತಿ ಪಡೆಯದವರು ಸ್ವತ್ತಿನ ದಾಖಲೆ, ಆಸ್ತಿ ಹಾಗೂ ನೀರಿನ ತೆರಿಗೆ ಪಾವತಿಸಿದ ರಸೀದಿ, ನಿವೇಶನ, ಕಟ್ಟಡ, ಖಾಲಿ ನಿವೇಶನ ಆಗಿದ್ದಲ್ಲಿ ಸ್ವಚ್ಛಗೊಳಿಸಿದ ಛಾಯಾಚಿತ್ರ, ಮಾಲೀಕರ ಭಾವಚಿತ್ರ ಸೇರಿ ಇತರೆ ದಾಖಲೆ ಒದಗಿಸಿ ಪಡೆದುಕೊಳ್ಳಲು ನಗರಸಭೆ ಕೋರಿದೆ.

ಕಂದಾಯಾಧಿಕಾರಿ ಟಿ.ಜಯಪ್ಪ, ನೌಕರರಾದ ಎಸ್.ಪಿ.ಲವ, ರವಿಚಂದ್ರ, ಮನೋಜ್, ಯೋಗೇಂದ್ರ, ಭೀಷ್ಮ, ವಿಜಯ್‌ಕುಮಾರ್, ತಿಮ್ಮೇಶ್, ಬಿಲ್ ಕಲೆಕ್ಟರ್ ಪಾಲಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net